ಪರಿಶಿಷ್ಟ ಜಾತಿ ಪಟ್ಟಿಯಿಂದ ಆದಿ ಕರ್ನಾಟಕ, ಆದಿ ದ್ರಾವಿಡವೆಂಬ ಹೆಸರನ್ನು ತೆಗೆದು ಮೂಲ ಜಾತಿ ಹೆಸರಲ್ಲಿ ಪ್ರಮಾಣ ಪತ್ರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕೂಡಲೇ ಶಿಫಾರಸು ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್ ಆಂಜನೇಯ ಒತ್ತಾಯಿಸಿದ್ದಾರೆ.
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ. ಇವುಗಳಲ್ಲಿ ಆದಿಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಎಂಬ ಒಂದೇ ಹೆಸರಿನಲ್ಲಿ ಜಾತಿ ಸೂಚಕ ಪ್ರಮಾಣ ಪತ್ರವನ್ನು ಮಾದಿಗರು, ಛಲವಾದಿಗರು ಪಡೆಯುತ್ತಿದ್ದು, ಬಹಳಷ್ಟು ಗೊಂದಲ ಉಂಟುಮಾಡುತ್ತಿದೆ. ಪರಿಶಿಷ್ಟ ಜಾತಿ ಪಟ್ಟಿಯಿಂದ ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಎಂದಿರುವ ಹೆಸರುಗಳನ್ನು ತೆಗೆದುಹಾಕುವುದೇ ಇದಕ್ಕೆ ಶಾಶ್ವತ ಪರಿಹಾರ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು” ಎಂದು ಒತ್ತಾಯಿಸಿದರು.
“ಒಳಮೀಸಲಾತಿ ನೀಡುವಂತೆ 30 ವರ್ಷಗಳಿಂದಲೂ ಮಾದಿಗ ಸಮುದಾಯ ಹಾಗೂ ವಿವಿಧ ಸಂಘಟನೆಗಳು ಹೋರಾಟ ನಡೆಸಿವೆ. ಇದರ ಫಲವಾಗಿ ಎಂಪರಿಕಲ್ ಡೇಟಾ ಸಂಗ್ರಹಿಸಿ ಗುಂಪುಗಳನ್ನು ವರ್ಗೀಕರಿಸಿ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆಯೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದು ಮಾದಿಗರಿಗೆ ಹಾಗೂ ಸಂಬಂಧಿತ ಜಾತಿಯವರಿಗೆ ವರವಾಗಿದೆ” ಎಂದರು.

“ಒಳಮೀಸಲಾತಿ ಜಾರಿಗೆ ತಕ್ಷಣ ಸ್ಪಂದಿಸಿರುವ ಸಾಮಾಜಿಕ ನ್ಯಾಯದ ಹರಿಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮೀಸಲು ಹಂಚಿಕೆಗೆ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗದ ವರದಿ ಕೇಳಿದೆ. 101 ಪರಿಶಿಷ್ಟ ಜಾತಿಗಳಿದ್ದು, ಇದರಲ್ಲಿ 1 ಸಾವಿರದಿಂದ 1 ಲಕ್ಷದ ಜನಸಂಖ್ಯೆಯೊಳಗಿರುವ ಸಣ್ಣ ಪ್ರಮಾಣದ 80 ಜಾತಿಗಳಿವೆ. ಉಳಿದಂತೆ ಬಹುಸಂಖ್ಯಾತ ಮಾದಿಗ, ಛಲವಾದಿ, ಲಂಬಾಣಿ, ಭೋವಿ, ಬಳಿಕ ಸ್ಥಾನದಲ್ಲಿ ಕೊರಚ, ಕೊರಮರು ಇದ್ದಾರೆ” ಎಂದರು.
“ಮಾದಿಗ ಸಂಬಂಧಿತ 16 ಜಾತಿಗಳಿವೆ. ಚಮ್ಮಾರ್, ಸಮಗಾರ, ಮೋಚಿ, ಡೋರ್, ದಕ್ಕಲಿಗ ಮತ್ತಿತರ ಜಾತಿಗಳು ಎಡಗುಂಪಿನಲ್ಲಿದ್ದು, ಜಾತಿ ಸೂಚಕ ಪ್ರಮಾಣಪತ್ರದಲ್ಲಿ ಆದಿಕರ್ನಾಟಕ ಎಂದು ಗುರುತಿಸಿಕೊಂಡಿವೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಾದಿಗ ಮತ್ತು ಛಲವಾದಿ ಸಮುದಾಯದವರು ಬಹುತೇಕ ಆದಿಕರ್ನಾಟಕ(ಎಕೆ), ಕೆಲವೆಡೆ ಆದಿದ್ರಾವಿಡ(ಎಡಿ)ದ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾರೆ” ಎಂದರು.
“ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆಗಳಲ್ಲಿ ಮಾದಿಗರು ಮತ್ತು ಛಲವಾದಿಗಳು ಆದಿಕರ್ನಾಟಕ ಎಂಬ ಒಂದೇ ಹೆಸರಿನಲ್ಲಿ ಜಾತಿ ಸೂಚಕ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮಾದಿಗರು ಆದಿಕರ್ನಾಟಕವೆಂದು ಮತ್ತು ಛಲವಾದಿಗಳು ಆದಿದ್ರಾವಿಡವೆಂದು ಜಾತಿಸೂಚಕ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದು ಎರಡು ಜಾತಿಗಳಲ್ಲಿ ಯಾವ್ಯಾವ ಜಾತಿಗಳು ಎಷ್ಟು ಸಂಖ್ಯೆಯಲ್ಲಿವೆಯೆಂದು ನಿಖರವಾಗಿ ಹೇಳಲು ಕಷ್ಟ. ಬಾಕಿ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಭಾಗಗಳಲ್ಲಿ ಮಾದಿಗರು ಮಾದಿಗರೆಂದು, ಹೊಲೆಯರು ಹೊಲೆಯರು ಮತ್ತು ಛಲವಾದಿಗರೆಂದು ಜಾತಿಸೂಚಕ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇಲ್ಲಿ ಯಾವುದೇ ಗೊಂದಲವಿಲ್ಲ” ಎಂದು ಸ್ಪಷ್ಟಪಡಿಸಿದರು.
“ನ್ಯಾ.ಸದಾಶಿವ ಆಯೋಗ ಮನೆ ಮನೆ ಸಮೀಕ್ಷೆ ನಡೆಸಿ ಯಾವ್ಯಾವ ಜಾತಿಯವರು ಎಷ್ಟು ಸಂಖ್ಯೆಯಲ್ಲಿದ್ದಾರೆ ಮತ್ತು ಹಿಂದುಳಿವಿಕೆಯನ್ನು ದಾಖಲಿಸಿ, ಒಳಮೀಸಲಾತಿ ವರ್ಗೀರಣಕ್ಕೆ ವರದಿ ಸಿದ್ಧಪಡಿಸಿದೆ. ಈ ವರದಿಯನ್ನೇ ಆಧಾರವಾಗಿಟ್ಟುಕೊಂಡು ಎಂಪರಿಕಲ್ ಡೇಟಾ ಪಡೆದು ಒಳಮೀಸಲಾತಿ ವರ್ಗೀಕರಣಕ್ಕೆ ನ್ಯಾ.ನಾಗಮೋಹನ್ ದಾಸ್ ಆಯೋಗ ಮುಂದಾಗಬೇಕೆಂಬುದು ನಮ್ಮ ಆಗ್ರಹ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವರದಿ ಪರಿಶೀಲನೆ ಮಾಡಲು ಆಯೋಗಕ್ಕೆ ಅವಕಾಶ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
“ನ್ಯಾ.ನಾಗಮೋಹನ್ ದಾಸ್ ಅವರು ದಲಿತ ಸಮುದಾಯದ ಪ್ರಗತಿಗೆ ಬದ್ಧರಾಗಿದ್ದು, ಅವರು ಅವಧಿಯೊಳಗೆ ವರದಿ ನೀಡಬೇಕು. ಆಯೋಗವು, ಸರ್ಕಾರಿ ಕೆಲಸದಲ್ಲಿರುವ ಜವಾನರಿಂದ ಐಎಎಸ್, ಐಪಿಎಸ್, ಐಎಫ್‍ಎಸ್, ಕೆಎಎಸ್ ಸೇರಿ ಉನ್ನತ ಹುದ್ದೆಯವರೆಗೆ ಇರುವ ನೌಕರರ ಇಲಾಖಾವಾರು ಜಾತಿವಾರು ಮಾಹಿತಿ ಸಂಗ್ರಹಿಸಿ, ಈ ಅಂಶದ ಆಧಾರದ ಮೀಸಲಾತಿಯಲ್ಲಿ ಸರ್ಕಾರಿ ನೌಕರಿ ಪಡೆಯುವಲ್ಲಿ ಯಾವ ಜಾತಿಗಳಿಗೆ ಅನ್ಯಾಯವಾಗಿದೆ ಎಂಬುದನ್ನು ಒಳಮೀಸಲಾತಿ ನೀಡುವ ಸಂದರ್ಭ ಪರಿಗಣಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನಿಧಿ ಆಸೆಗಾಗಿ ಪರಿಚಯಸ್ಥನನ್ನು ಕರೆದೊಯ್ದು ಬಲಿ ಕೊಟ್ಟ ದುರುಳರು
“ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಡಿಪ್ಲೊಮಾ, ನರ್ಸಿಂಗ್, ಐಟಿಐ, ಪ್ಯಾರಾ ಮೆಡಿಕಲ್, ಪ್ರಥಮದರ್ಜೆ, ಪಿಯು ಕಾಲೇಜು, ಪ್ರೌಢಶಾಲೆ ಹೀಗೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರು ಸರ್ಕಾರಿ ಅನುದಾನ ಮತ್ತು ನಿವೇಶನ ಪಡೆದಿದ್ದಾರೆ. ಪರಿಶಿಷ್ಟ ಗುಂಪಿನಲ್ಲಿರುವ ಯಾವ್ಯಾವ ಜಾತಿಯವರು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆಂಬ ಮಾಹಿತಿಯನ್ನು ಸಂಗ್ರಹಿಸಬೇಕು. ಹೀಗೆ ಎಲ್ಲ ಕ್ಷೇತ್ರದಲ್ಲಿ ಮಾಹಿತಿ ಸಂಗ್ರಹಿಸಿದರೆ ಯಾವ ಜಾತಿ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ಹೆಚ್ಚು ಹಿಂದುಳಿದಿದೆ ಎಂಬುದು ಸ್ಪಷ್ಟಗೊಳ್ಳಲಿದೆ. ಆಗ ಒಳಮೀಸಲಾತಿ ವರ್ಗೀಕರಣದ ವೇಳೆ ಮೀಸಲು ಹಂಚಿಕೆಗೆ ಸಹಕಾರಿಯಾಗಲಿದೆ. ಎಸ್‍ಸಿಪಿಟಿ, ಟಿಎಸ್‍ಪಿ ಅನುದಾನದ ಹಂಚಿಕೆ ಹಾಗೂ ಎಲ್ಲ ಯೋಜನೆಗಳಲ್ಲೂ ಒಳಮೀಸಲಾತಿ ಕಲ್ಪಿಸಬೇಕು” ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಪಂ ಮಾಜಿ ಸದಸ್ಯರಾದ ಆರ್ ಕೃಷ್ಣಮೂರ್ತಿ, ಆರ್ ನರಸಿಂಹರಾಜು, ವಕೀಲರಾದ ಶರಣಪ್ಪ, ರವೀಂದ್ರ ಸೇರಿದಂತೆ ಇತರರು ಇದ್ದರು.
