ಕೊಂಡಾಪುರ ಗ್ರಾಮದ ಸರ್ವೆ ನಂಬರ್ 22ರಲ್ಲಿ 2.34 ಎಕರೆ ಸರ್ಕಾರಿ ಜಮೀನನ್ನು ಸ್ಮಶಾನಕ್ಕೆ ಮೀಸಲಿರಿಸಲಾಗಿದೆ. ಆ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿಯನ್ನು ತೆರೆವುಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿ ಮುಖಂಡರು ಪ್ರತಿಭಟನೆ ನಡೆಸಿದ್ದು, ಹೊಳಲ್ಕೆರೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, “ಸುಮಾರು ಎರಡ್ಮೂರು ತಲೆಮಾರುಗಳಿಂದ ಈ ಜಾಗದಲ್ಲಿ ಎಸ್‌ಸಿ ಜನಾಂಗದವರು ಸ್ಮಶಾನವನ್ನು ಮಾಡಿಕೊಂಡು ತಮ್ಮ ಹಿರಿಯರನ್ನು ಅಲ್ಲಿಯೇ ಶವ ಸಂಸ್ಕಾರ ಮಾಡುತ್ತಾ ಬಂದಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕೊಂಡಾಪುರ ಗ್ರಾಮದ ಕೆಲ ರೈತರುಗಳು ಈ ಜಾಗವನ್ನು ಒತ್ತುವರಿ ಮಾಡಿದ್ದಾರೆ” ಎಂದು ಆರೋಪಿಸಿದರು.
“ಈ ವಿಷಯ ಸಂಬಂಧ ತಹಶೀಲ್ದಾರ್ ಮತ್ತು ಪೊಲೀಸ್ ಇಲಾಖೆಗೆ ಹಲವು ಬಾರಿ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಈಗ ಶವಸಂಸ್ಕಾರ ಮಾಡಲು ಒಂದು ಗೆರೆ ಕೂಡ ಜಾಗ ಇಲ್ಲದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಭೂಮಾಪನ ಇಲಾಖೆಯ ಸರ್ವೇಯರ್ ಕಳುಹಿಸಿ ಸ್ಥಳ ಪರಿಶೀಲಿಸಿ ಸರ್ವೆ ನಂಬರ್ 22ರ ಸರ್ಕಾರಿ ಜಾಗವನ್ನು ಬಿಡಿಸಿಕೊಟ್ಟು, ಈ ಜಾಗವನ್ನು ಎಸ್‌ಸಿ ರುದ್ರ ಭೂಮಿಯಾಗಿ ಮೀಸಲಿಟ್ಟು ಅಭಿವೃದ್ಧಿ ಮಾಡಿಕೊಡಬೇಕು. ಹಾಗಾಗಿ ತಾವುಗಳು ಕೂಡಲೇ ಮಧ್ಯ ಪ್ರವೇಶಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘರ್ಷ ಸಮಿತಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ” ಎಂದು ಎಚ್ಚರಿಸಿದರು.
“ಒತ್ತುವರಿದಾರರಿಂದ ನಮಗೆ ತೊಂದರೆಯಾಗುತ್ತಿದ್ದು, ಶವ ಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ. ಅವರಿಂದ ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ಬಿಡಿಸಿಕೊಟ್ಟು ಶವ ಸಂಸ್ಕಾರಕ್ಕೆ ಅನುಕೂಲ ಮಾಡಿಕೊಡಬೇಕು” ಎಂದು ದಸಂಸ ಮುಖಂಡ ಕೆಂಗುಂಟೆ ಜಯಣ್ಣ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಿವಾರ್ಡ್ ಯೋಜನೆ | ವಿಶ್ವಬ್ಯಾಂಕ್ ತಂಡದೊಂದಿಗೆ ವಿಸ್ತೃತ ಚರ್ಚೆ
ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್ ಮನವಿ ಸ್ವೀಕರಿಸಿ ಮಾತನಾಡಿ, “ಭೂಮಾಪನ ಇಲಾಖೆಯಲ್ಲಿ ಸರ್ವೆಯರ್‌ಗಳ ಸಂಖ್ಯೆ ಕಡಿಮೆ ಇದೆ. ಶೀಘ್ರದಲ್ಲಿ ಅಳತೆ ನಡೆಸುವಂತೆ ಹೇಳಿದ್ದೇನೆ. ಜಾಗವನ್ನು ಗುರುತಿಸಿದ ಬಳಿಕ ಕ್ರಮ ಕೈಗೊಂಡು ಸ್ಮಶಾನಕ್ಕೆ ಜಾಗ ಕೊಡಿಸಲು ತಾಲೂಕು ಆಡಳಿತ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಭರವಸೆ ನೀಡಿದರು.
ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ, ತಾಲೂಕು ಸಂಚಾಲಕ ಕೆ ಆರ್ ಸುಂದರ ಮೂರ್ತಿ, ವಿಜಯಕುಮಾರ್ ಮೂರ್ತಪ್ಪ, ನವೀನ್ ಮದ್ದೇರು, ಎನ್ ಪ್ರಭಾಕರ್, ವಿಜಯ್, ಶಿವಮೂರ್ತಿ, ಕರಿಯಪ್ಪ, ಮಂಜುನಾಥ, ಸಂಗಪ್ಪ, ವೆಂಕಟೇಶ್, ರಮೇಶ್, ರಘು ಹಾಗೂ ಕೊಂಡಾಪುರ ಗ್ರಾಮಸ್ಥರು, ದಲಿತ ಸಂಘರ್ಷ ಸಮಿತಿಯ ಸದಸ್ಯರು ಇದ್ದರು.