ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡಲಾಗುವ ಶೈಕ್ಷಣಿಕ ಸಹಾಯಧನ ವಿತರಣೆಗೆ ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರ್ಮಿಕ ಇಲಾಖೆಯ ವಿರುದ್ಧ ಚಿತ್ರದುರ್ಗ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘವು ಪ್ರತಿಭಟನೆ ನಡೆಸಿದೆ.
ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ಮತ್ತು ಕಾರ್ಮಿಕರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ವೈ.ತಿಪ್ಪೇಸ್ವಾಮಿ, “ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ದೊರಕಬೇಕಾದ ನೊಂದಾಯಿತ ಕಟ್ಟಡ ಕಾರ್ಮಿರ ಮಕ್ಕಳ ಶೈಕ್ಷಣಿಕ ಸಹಾಯಧನ ತುರ್ತು ಮುಂಜೂರು ಮಾಡಬೇಕು. ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ 2021- 22ನೇ ಸಾಲಿನ ಶೈಕ್ಷಣಿಕ ಸಹಾಯಧನ ಇಲ್ಲಿಯವರೆಗೂ ಮಂಜೂರಾಗಿಲ್ಲ. ಕೂಡಲೇ, ಆ ಹಣವನ್ನೂ ಮಂಜೂರು ಮಾಡಬೇಕು” ಎಂದು ಆಗ್ರಹಿಸಿದರು.
“ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಮದುವೆ ಸಹಾಯಧನವನ್ನು 1,00,000 ಲಕ್ಷಕ್ಕೆ ಹೆಚ್ಚಿಸಬೇಕು. ಕಾರ್ಮಿಕ ಮಹಿಳೆಯು ಹೆರಿಗೆಯಾದ 6 ತಿಂಗಳ ಕಾಲ ತನ್ನ ಮಗುವಿನ ಪೋಷಣೆಯಲ್ಲಿ ತೊಡಗಿರುತ್ತಾಳೆ. ಅಂತಹ ಮಹಿಳೆಗೆ ಪ್ರತ್ಯೇಕವಾಗಿ 60,000 ಸಾವಿರ ರೂ. ಹಣವನ್ನು ಮಂಜೂರು ಮಾಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್, ತಾಲ್ಲೂಕು ಅಧ್ಯಕ್ಷ ಜಾವಿದ್ ಬಾಷ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯ ದರ್ಶಿ ಲಕ್ಷ್ಮೀದೇವಿ, ಜಿಲ್ಲಾಖಂಜಾಚಿ ಅಶೋಕ್, ಜಂಟಿ ಕಾರ್ಯದರ್ಶಿ ರಾಜು, ಗ್ರಾಮಾಂತರ ಕಾರ್ಯದರ್ಶಿ ತಿಪ್ಪೇಸ್ವಾಮಿ, ತಾಲ್ಲೂಕು ಕಾರ್ಯದರ್ಶಿ ಮನ್ಸೂರ್ ಭಾಷ, ರಾಜು, ಸಂಚಾಲಕರಾದ ಈರೇಶ್ ಪಿ ಕಲ್ಲಹಳ್ಳಿ, ಸಹಾ ಸಂಚಾಲಕರಾದ ಚಳ್ಳಕೆರಪ್ಪ, ಸಂಘಟನಾ ಕಾರ್ಯದರ್ಶಿ ನಾಗಭೂಷಣ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಅಂಜನಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.