ತನ್ನ ಬಾಲ್ಯವಿವಾಹ ವಿರುದ್ಧ ಧೈರ್ಯದಿಂದ ಹೋರಾಟ ನಡೆಸಿ, ಬಾಲ್ಯವಿವಾಹದ ಕಪಿಮುಷ್ಠಿಯಿಂದ ಪಾರಾಗಿರುವ ಚಿತ್ರದುರ್ಗ ಜಿಲ್ಲೆಯ ಅಪ್ರಪ್ತ ಬಾಲಕಿಗೆ ಶೌರ್ಯ ಪ್ರಶಸ್ತಿ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ. ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಜಿ ರಾವ್ ಅವರು ಸರ್ಕಾರ ಪತ್ರ ಬರೆದಿದ್ದಾರೆ.
ಇತ್ತೀಚೆಗೆ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೆಡ್ಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 13 ವರ್ಷದ ಬಾಲಕಿಗೆ ಬಲವಂತವಾಗಿ ಬಾಲ್ಯವಿವಾಹ ಮಾಡಲು ಯತ್ನಿಸಲಾಗಿತ್ತು. ಬಾಲಕಿಯನ್ನು ಮನೆಯಲ್ಲಿ ಬಲವಂತವಾಗಿ ಹಿಡಿದುಕೊಂಡು ವರನಿಂದ ತಾಳಿ ಕಟ್ಟಿಸಲು ಪೋಷಕರು ಮುಂದಾಗಿದ್ದರು. ಬಾಲ್ಯವಿವಾಹವನ್ನು ವಿರೋಧಿಸಿ ಬಾಲಕಿ ಚೀರಾಟ ನಡೆಸಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕೂಡಲೇ, ಪೊಲೀಸರು ಗ್ರಾಮಕ್ಕೆ ಧಾವಿಸಿ, ಬಾಲಕಿಯನ್ನು ರಕ್ಷಿಸಿದ್ದರು. ಬಾಲಮಂದಿರಕ್ಕೆ ಕಳುಹಿಸಿದ್ದರು. ಬಾಲಕಿಯ ತಾಯಿ, ವರ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಸೋಮವಾರ ಪ್ರಕರಣವನ್ನೂ ದಾಖಲಿಸಲಾಗಿದೆ.
ಈ ಬೆನ್ನಲ್ಲೇ, ಬಾಲ್ಯವಿವಾಹದ ವಿರುದ್ಧ ಹೋರಾಟ ನಡೆಸಿದ ಬಾಲಕಿಗೆ ಶೌರ್ಯ ಪ್ರಶಕ್ತಿ ನೀಡಬೇಕೆಂದು ಒತ್ತಾಯಿಸಿ ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಜಿ. ರಾವ್ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ. “ಈ ಬಾಲಕಿಯ ಪ್ರಕರಣವು ಬಾಲ್ಯವಿವಾಹದ ವಿರುದ್ಧ ಜಾಗೃತಿ ಮೂಡಿಸಲು ಉತ್ತಮ ಮಾದರಿಯಾಗಿದೆ. ಬಾಲಕಿಯ ಶೌರ್ಯವು ಸಾವಿರಾರು ಹೆಣ್ಣುಮಕ್ಕಳಿಗೆ ಸ್ಪೂರ್ಥಿಯಾಗುತ್ತದೆ. ತಮ್ಮ ಹಕ್ಕುಗಳನ್ನು ಅರಿತು ಹೋರಾಡಲು ದಾರಿ ದೀಪವಾಗುತ್ತದೆ. ಇದನ್ನು,ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಸತ್ಯ ಹೇಳಿದ್ದಕ್ಕೆ ಸಂಕಷ್ಟ: ಭ್ರಷ್ಟಾಚಾರ ಬಯಲು ಮಾಡಿದ ‘ಮಲಿಕ್’ ವಿರುದ್ಧವೇ ಮೋದಿ ಸರ್ಕಾರ ದಾಳಿ?
“ಬಾಲ್ಯವಿವಾಹದ ವಿರುದ್ಧ ಸಮಾಜದಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಶಾಲೆ, ಗ್ರಾಮ ಪಂಚಾಯತಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಾಲ್ಯವಿವಾಹದ ದುಷ್ಪರಿಣಾಮಗಳು ಮತ್ತು ಅದರ ವಿರುದ್ದದ ಕಾನೂನುಗಳ ಕುರಿತು ಬರಹಗಳು, ಭಿತ್ತಿಚಿತ್ರಗಳು ಬರೆಸಬೇಕು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಅನ್ನು ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಬೇಕು” ಎಂದು ಒತ್ತಾಯಿಸಿದ್ದಾರೆ.