ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ಅಂಬೇಡ್ಕರ್ ಜಯಂತಿ ಆಚರಿಸದೆ ಕರ್ತವ್ಯ ಲೋಪ ಎಸಗಿರುವ ಆರೋಪ ಚಿತ್ರದುರ್ಗ ಜಿಲ್ಲೆಯಲ್ಲಿ ಕೇಳಿಬಂದಿದ್ದು, ಗ್ರಾಮಸ್ಥರು ಹಾಗೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತೇಕಲವಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಿಸದೆ ಅವಮಾನ ಮಾಡಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜನಾಯ್ಕನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ತೇಕಲವಟ್ಟಿ ಗ್ರಾಮಸ್ಥರು ಹಾಗೂ ಕರುನಾಡ ವಿಜಯಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಗ್ರಾಮ ಪಂಚಾಯಿತಿ ಪಿಡಿಒ ಮಂಜನಾಯ್ಕ ಅವರ ವಿರುದ್ಧ ಧಿಕ್ಕಾರಗಳನ್ನು ಕೂಗಿ ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಅಭಿವೃದ್ಧಿ ವಿಚಾರದಲ್ಲಿ ಬದಲಾವಣೆಯ ಗಾಳಿ: ಗೀತಾ ಶಿವರಾಜ್‌ಕುಮಾರ್
ಪ್ರತಿಭಟನೆಯಲ್ಲಿ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ ಟಿ ಶಿವಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಕಾರ್ಯಾಧ್ಯಕ್ಷ ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಹಿರಿಯೂರು ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಸ್ವಾಮಿ, ತೇಕಲವಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಸೇರಿದಂತೆ ಬಹುತೇಕರು ಇದ್ದರು.
