ಕಣ್ಣಿನ ಉರಿಯೂತಕ್ಕೆ ಭಯಬೇಡ, ಸೂಕ್ತ ಆರೈಕೆ ಚಿಕಿತ್ಸೆಯಿಂದ ಗುಣಮುಖವಾಗುತ್ತದೆ ಎಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ ಗಿರೀಶ್ ಹೇಳಿದರು.
ಕಣ್ಣಿನ ಉರಿ ಊತ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ತಂಡ ಚಿತ್ರದುರ್ಗ ತಾಲೂಕಿನ ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದು, ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದೆ.
“ಕೆಲವು ದಿನಗಳಿಂದ ಹವಾಮಾನ ವ್ಯತ್ಯಾಸದಿಂದ ಮತ್ತು ನಿರಂತರವಾಗಿ ಬರುತ್ತಿರುವ ಮಳೆಯಿಂದ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ಕೆಲವರಲ್ಲಿ ಕಣ್ಣಿನ ಉರಿ ಊತ ‘ಕಂಜಂಕ್ಟಿವಿಟಿಸ್’ ಸಮಸ್ಯೆ ಕಂಡು ಬರುತ್ತಿದೆ. ಅಂತಹವರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಬೇಕು. ನೋವು ನಿವಾರಕ ಮಾತ್ರೆ ಮತ್ತು ಕಣ್ಣಿನ ಡ್ರಾಪ್ಸ್ ಚಿಕಿತ್ಸೆ ನೀಡಲಾಗುತ್ತದೆ” ಎಂದರು.
“ಮೂಗಿನ ಮತ್ತು ಗಂಟಲಿನ ಸೋಂಕು ಇದ್ದಲ್ಲಿ ಅದಕ್ಕೆ ಬೇಕಾದ ಚಿಕಿತ್ಸೆ ನೀಡುವುದು, ಸಾಮಾನ್ಯವಾಗಿ ಕಣ್ಣಿನ ಬಿಳಿ ಭಾಗ ಕೆಂಪಾಗುತ್ತದೆ. ಕಣ್ಣುಗಳಲ್ಲಿ ಉರಿ ಮತ್ತು ನೋವು ಇರುತ್ತದೆ. ಕಣ್ಣುಗಳಿಂದ ನಿರಂತರವಾಗಿ ನೀರು ಹೊರ ಬರುತ್ತಿರುತ್ತದೆ. ಕಣ್ಣುಗಳು ಊದಿಕೊಳ್ಳುತ್ತವೆ. ಇಂಥ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಸೂಕ್ತ ಚಿಕಿತ್ಸೆ ಪಡೆಯಬೇಕು” ಎಂದು ಸಲಹೆ ನೀಡಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್ ಮಂಜುನಾಥ್ ಮಾತನಾಡಿ, “ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಜನ ಇರುವ ಪ್ರದೇಶಗಳಿಗೆ ಹೋಗುವುದು ಕಡಿಮೆ ಮಾಡಬೇಕು. ಪದೇ ಪದೆ ಕಣ್ಣುಗಳನ್ನು ಮುಟ್ಟುವುದನ್ನು ಕಡಿಮೆ ಮಾಡಬೇಕು. ಆಗಾಗ ಸೋಪಿನಲ್ಲಿ ಕೈ ತೊಳೆಯುವುದನ್ನು ಅಭ್ಯಾಸ ಮಾಡಬೇಕು. ಕಣ್ಣಿನ ಉರಿ ಊತ ಬಂದ ವ್ಯಕ್ತಿ ಬೇರೆಯವರ ಜೊತೆ ನಿಕಟ ಸಂಪರ್ಕ ಹೊಂದುವುದನ್ನು ತಪ್ಪಿಸಬೇಕು. ಸೋಂಕಿತ ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | 48 ಮಂದಿಗೆ ಗುಲಾಬಿ ಕಣ್ಣು ರೋಗ; ಎಚ್ಚರ ವಹಿಸುವಂತೆ ವೈದ್ಯಾಧಿಕಾರಿ ಸೂಚನೆ
ಕಣ್ಣಿನ ಡ್ರಾಪ್ಸ್ ಬಳಸುವ ಬಗ್ಗೆ ಔಷಧಿಗಳನ್ನು ನುಂಗುವ ವಿಧಾನದ ಬಗ್ಗೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಮುಗಪ್ಪ ತಿಳಿಸಿದರು
ಕಾರ್ಯಕ್ರಮದಲ್ಲಿ ಡಾ. ದುಶಾಂತ್, ಡಾ. ಅಕ್ಷಯ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್, ರಾಮಪ್ಪ ಸ್ವಾಮಿ, ಕಿರಣ್ ಕುಮಾರ್, ರೇಣುಕಾ, ಆಶಾಕಾರ್ಯಕರ್ತೆಯರು, ಸಾರ್ವಜನಿಕರು ಭಾಗವಹಿಸಿದ್ದರು.