“ಭಾರತೀಯ ಕಾನೂನಿನಲ್ಲಿ ಶಿಕ್ಷಣ ಮೂಲಭೂತ ಹಕ್ಕು. ಶಿಕ್ಷಣ ಮಾನವನ ವಿಕಾಸದ ಹೆದ್ದಾರಿಯಾಗಿದೆ. ಶಿಕ್ಷಣದಿಂದ ನೈತಿಕ ಮೌಲ್ಯಗಳನ್ನು ಬಿತ್ತುವುದರಿಂದ ಉತ್ತಮ ಸಮಾಜದ ನಿರ್ಮಾಣ ಸಾದ್ಯವಾಗುತ್ತದೆ” ಎಂದು ಚಳ್ಳಕೆರೆ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು, ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಸಮೀರ್ ಪಿ ನಂದ್ಯಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಚಿತ್ರದುರ್ಗ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಮಾಜ ಪರಿವರ್ತನಾ ಸೇವಾ ಸಂಸ್ಥೆ ಚಳ್ಳಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಕಾನೂನು ಜಾಗೃತಿ ಕಾರ್ಯಕ್ರಮ’ದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
“ಭಾರತೀಯ ಕಾನೂನಿನಲ್ಲಿ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಲಾಗಿದೆ. ಶಿಕ್ಷಣದಿಂದ ನೈತಿಕ ಮೌಲ್ಯಗಳನ್ನು ಬಿತ್ತುವುದರಿಂದ ಉತ್ತಮ ಸಮಾಜವು ನಿರ್ಮಾಣವಾಗುತ್ತದೆ. ಇದರಿಂದ ಉತ್ತಮ ದೇಶ ನಿರ್ಮಿತವಾಗುತ್ತದೆ. ಈ ಕಾರಣದಿಂದಲೇ ಭಾರತೀಯ ಕಾನೂನಿನಲ್ಲಿ ಶಿಕ್ಷಣವನ್ನು 14 ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನಾಗಿ ಮಾಡಲಾಗಿದೆ” ಎಂದು ತಿಳಿಸಿದರು.
“ಶಿಕ್ಷಣ ಒಂದು ದೇಶದ ಅಭಿವೃದ್ಧಿಯ ಬಾಗಿಲು ತೆರೆಯುವ ಕೀಲಿ ಕೈ. ಶಿಕ್ಷಣವೇ ಮಾನವನ ವಿಕಾಸದ ಹೆದ್ದಾರಿ. ಹಾಗಾಗಿ ನಾವೆಲ್ಲರೂ ಸುಶಿಕ್ಷಿತರಾಗುವುದರ ಮೂಲಕ, ಭಾರತೀಯ ಸಂವಿಧಾನದ ಮತ್ತು ಕಾನೂನಿನ ಘನತೆ, ಗೌರವ, ಸ್ವಾಭಿಮಾನವನ್ನು ಎತ್ತಿ ಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ” ಎಂದು ಅಭಿಪ್ರಾಯಪಟ್ಟರು.

“ಭಾರತದಂತಹ ದೇಶದ ಒಳಗೆ ಸಾಮಾಜಿಕ ಮೂಲ ಪಿಡುಗುಗಳಾದ ಬಾಲ್ಯ ವಿವಾಹ, ವರದಕ್ಷಿಣೆ, ಬಾಲಕಾರ್ಮಿಕ ಪದ್ಧತಿ ಹಾಗೂ ಜೀತಪದ್ಧತಿಯಂತಹ ಮೊದಲಾದ ಅನಿಷ್ಟಗಳನ್ನು ಇನ್ನೂ ಹೋಗಲಾಡಿಸಬೇಕಿದೆ” ಎಂದು ಕರೆ ನೀಡಿದರು.
“ಸಮಾನತೆ, ಮಹಿಳಾ ಹಕ್ಕುಗಳು ಮತ್ತು ಮಕ್ಕಳ ಹಕ್ಕುಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು, ರಾಜ್ಯ ನೀತಿ-ನಿರ್ದೇಶಕ ತತ್ವಗಳು, ಇವುಗಳು ಸಂವಿಧಾನದ ಮತ್ತು ಕಾನೂನಿನ ಆಸ್ತಿ. ಆದ್ದರಿಂದ ಇವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಬೇಕಿದೆ. ಕಾನೂನುಗಳು ನಮ್ಮ ಸಂವಿಧಾನದ ಜೀವಾಳ. ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ಸಂವಿಧಾನ ಮತ್ತು ಭಾರತೀಯ ಕಾನೂನಿನ ಆಶಯಗಳನ್ನು ಎತ್ತಿ ಹಿಡಿಯಬೇಕಾಗಿದೆ. ಪ್ರಜಾಪ್ರಭುತ್ವ ನಮ್ಮ ಧರ್ಮವಾಗಬೇಕು, ಅದರೊಳಗಿನ ಕಾನೂನುಗಳು ಧರ್ಮಗ್ರಂಥವಾಗಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿನ್ನದ ಬೆಲೆ ವಿಪರೀತ ಏರಿಕೆ! ಬಡವರ ಪಾಲಿಗೆ ಬಂಗಾರ ಮರೀಚಿಕೆ
ವಕೀಲರ ಸಂಘದ ಅಧ್ಯಕ್ಷ ಕೆಎಂ ನಾಗರಾಜ್ ಮಾತನಾಡಿ “ಸೂರ್ಯನಿಲ್ಲದ ಜಗತ್ತನ್ನು ಹೇಗೆ ಊಹಿಸಿಕೊಳ್ಳಲು ಸಾಧ್ಯವಿಲ್ಲವೋ, ಹಾಗೆಯೇ ಕಾನೂನುಗಳು ಇಲ್ಲದ ದೇಶವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಕಾನೂನುಗಳು ಒಂದು ದೇಶದ ರಕ್ಷಾ ಕವಚ ಇದ್ದಂತೆ, ಕಾನೂನುಗಳಿಂದಲೇ ಭಾರತದಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ. ಕಾನೂನುಗಳು ಇಲ್ಲದೆ ಹೋದರೆ, ಇಡೀ ದೇಶದಲ್ಲಿ ಅಶಾಂತಿ, ದೌರ್ಜನ್ಯ,ದಬ್ಬಾಳಿಕೆ, ಮೊದಲಾದವುಗಳು ಉಂಟಾಗಿ ದೇಶ ಅವನತಿಯತ್ತ ಸಾಗುತ್ತದೆ. ಆದ್ದರಿಂದ ಕಾನೂನುಗಳನ್ನು ಗೌರವಿಸಿ ಪಾಲಿಸಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಕಾನೂನುಗಳನ್ನು ನಾವೆಲ್ಲರೂ ರಕ್ಷಿಸೋಣ” ಎನ್ನುವ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಗಳಮ್ಮ ರಂಗಸ್ವಾಮಿ, ಸಮಾಜ ಪರಿವರ್ತನಾ ಸೇವಾ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಮರಿಸ್ವಾಮಿ, ತಾಲ್ಲೂಕು ಅಧ್ಯಕ್ಷ ರಾಮರೆಡ್ಡಿ, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಸಂತೋಷ್, ಸಂಪತ್ ಕುಮಾರ್, ಕ್ಷೇತ್ರಶಿಕ್ಷಣಾಧಿಕಾರಿ ಸುರೇಶ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಪಾಲಯ್ಯ, ಪ್ರಧಾನ ಕಾರ್ಯದರ್ಶಿ ಎಂ ಸಿದ್ದರಾಜು, ಕೆ ನಾಗರಾಜ್, ಆರಕ್ಷಕ ಇಲಾಖೆಯ ನಾಗೇಂದ್ರಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಲ್ಲೇಶಪ್ಪ, ಸಮಾಜ ಕಲ್ಯಾಣ ಇಲಾಖೆಯ ಮಹಾಲಿಂಗಪ್ಪ, ಮೇಲ್ವಿಚಾರಕ ಆಲಿಜಾನ್, ಕಾರ್ಯದರ್ಶಿ ಮಂಜುಳಾ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
