ವಿಧಾನ ಸಭೆಯಲ್ಲಿ ಚರ್ಚಿಸದೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಮಂತ್ರಿಗಳಿಗೆ ಸಂಬಳ, ಸಾರಿಗೆ ಭತ್ಯೆ, ಸಾರಿಗೆ, ವಿಮಾನ, ವೈದ್ಯಕೀಯ ಅನೇಕ ಸೌಲಭ್ಯಗಳನ್ನು ದುಪ್ಪಟ್ಟು ಸಂಬಳ ( ಈಗಿರುವ ಸಂಬಳಕ್ಕೆ ಎರಡು ಪಟ್ಟು) ಅನುಮೋದನೆಗೆ ಕಳುಹಿಸಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಮುಖಂಡರು ಹಾಗೂ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಕಾಯ್ದೆ ತಿರಸ್ಕರಿಸಲು ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, “ವಿಧಾನ ಸಭೆ, ವಿಧಾನ ಪರಿಷತ್ ನಲ್ಲಿ ಕಾಯ್ದೆಯನ್ನು ಸದನದಲ್ಲಿ ಚರ್ಚಿಸದೇ ಕಾಂಗ್ರೆಸ್, ಬಿ.ಜೆ.ಪಿ ಮತ್ತು ಜೆ.ಡಿ.ಎಸ್. ಪಕ್ಷಗಳು ಪರ-ವಿರೋಧವಿಲ್ಲದೇ ಸಂಬಳ ಹೆಚ್ಚುವರಿಗೆ ಅನುಮೋದನೆ ನೀಡಿರುವುದನ್ನು ರೈತ ಸಂಘ ಹಾಗೂ ಹಸಿರು ಸೇನೆ ಉಗ್ರವಾಗಿ ಖಂಡಿಸುತ್ತಾ ರಾಜ್ಯ ಪಾಲರು ಅನುಮೋದನೆಗೆ ಹೋಗಿರುವ ಕಾಯ್ದೆಯನ್ನು ಅಂಕಿತ ಹಾಕದೇ ವಾಪಾಸ್ ಕಳಿಸಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಜನ ಸಾಮಾನ್ಯರ ಮೇಲೆ ಸ್ಟಾಂಪ್. ಸರ್ವೇ, ಭೂದಾಖಲೆ, ರಿಜಿಸ್ಟ್ರೇಷನ್, ಕಂದಾಯ, ಪಹಣಿ, ಬಸ್ಸಿನ ದರ, ವಿದ್ಯುತ್, ನೀರಿನ ದರ, ಮುಂತಾದ ವಸ್ತುಗಳ ಮೇಲೆ ನಾಲ್ಕುಪಟ್ಟು ತೆರಿಗೆ ಹಾಕಿ ಆ ಹಣದಲ್ಲಿ ಸಂಬಳ ಭತ್ಯೆ ಹೆಚ್ಚಿಸಿಕೊಂಡು, ಮೋಜು ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಈ ಬಾರಿ ಅಧಿವೇಶನ ಪ್ರಾರಂಭದಿಂದ ಮೇಲ್ಮನೆ, ಕೆಳ ಮನೆಯಲ್ಲಿ ಜನರ ಸಮಸ್ಯೆಗಳ ಮತ್ತು ಸಾರ್ವಜನಿಕರಿಗೆ ಆಗತ್ಯ ಸೌಲಭ್ಯಕ್ಕೆ ಚರ್ಚೆ ಮಾಡಲು ಸದನದಲ್ಲಿ 20- 30 ಜನ ಶಾಸಕರು ಇರುತ್ತಾರೆ. ಉಳಿದ ಶಾಸಕರು ಸಭೆಗೆ ಗೈರು ಹಾಜರಿಯಾಗಿ ಅವರ ಸ್ವಂತ ಸಭೆ-ಸಮಾರಂಭಗಳಲ್ಲಿ ಭಾಗವಹಿಸಿರುತ್ತಾರೆ. ವಿಧಾನ ಸಭೆ, ವಿಧಾನ ಪರಿಷತ್ ಗೆ ಶಾಸಕರು ಅವಮಾನ ಮಾಡುತ್ತಿದ್ದು ಇವರಿಗೆ ಸಂಬಳ, ಸಾರಿಗೆ ಹೆಚ್ಚು ಮಾಡಿಕೊಳ್ಳುವ ನೈತಿಕತೆ ಇಲ್ಲ. ಸಭಾಧ್ಯಕ್ಷರು ಸದನದಲ್ಲಿ ಶಾಸಕರ ಗೈರು ಹಾಜರಿ ಎದ್ದು ಕಾಣುತ್ತಿದೆ. ಆದ್ದರಿಂದ ಶಾಸಕರು, ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವುದರಿಂದ ಸರ್ಕಾರವನ್ನು ವಜಾಮಾಡಬೇಕೆಂದು ಒತ್ತಾಯಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಒದಗಿಸಿಲ್ಲ. ವಿಧವಾ ವೇತನ, ಮಾನಾಸನ ಕೊಟ್ಟಿಲ್ಲ, ರೈತರಿಗೆ ವಿದ್ಯುತ್ ಸರಬರಾಜು ಹಾಗೂ ಅಕ್ರಮ-ಸಕ್ರಮ ಗಳಂತ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಆದರೆ ಇವರ ಮೋಜು ಮಸ್ತಿಯ ಜೀವನಕ್ಕೆ ಸದನದಲ್ಲಿ ಚರ್ಚೆಯಿಲ್ಲದೆ, ಎಲ್ಲಾ ಪಕ್ಷಗಳು ಪಕ್ಷಭೇದ ಮರೆತು ಒಂದಾಗಿ ಸಂಬಳ ಸಾರಿಗೆ, ಇತರೆ ಭತ್ಯೆ ಎರಡು ಪಟ್ಟು ಜಾಸ್ತಿ ಮಾಡಿಕೊಂಡು ಮತದಾರರಿಗೆ ನಾಡಿನ ಜನತೆಗೆ ದ್ರೋಹ ಬಗೆಯುತ್ತಿರುವ ಸದನವನ್ನು ವಜಾಮಾಡಬೇಕೆಂದು” ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಜಾತಿ ತಾರತಮ್ಯ, ಎಸ್ಡಿಎಂಸಿ ಅಧ್ಯಕ್ಷನಿಂದ ಮುಖ್ಯ ಶಿಕ್ಷಕನ ವಿರುದ್ಧ ದೂರು, ಕ್ರಮಕ್ಕೆ ಆಗ್ರಹ.
ಈ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರಾದ ಮರ್ಲಹಳ್ಳಿ ರವಿಕುಮಾರ್, ಬೇಡ ರೆಡ್ಡಿ ಹಳ್ಳಿ ಬಸವ ರೆಡ್ಡಿ, ಗುಂಡೂರು ತಿಮ್ಮಪ್ಪ, ಚಂದ್ರಪ್ಪ, ದೊಡ್ಡಸೂರಯ್ಯ, ದೊಡ್ಡಯ್ಯ, ಮುತ್ತುಗರಳ್ಳಿ ವಿಜಯಣ್ಣ ಈಶ್ವರಪ್ಪ ಕೆಟಿ, ರಾಜಣ್ಣ, ಈರಣ್ಣ, ಪಿ ಟಿ ಹಳ್ಳಿ ನಿಂಗಣ್ಣ ಹಾಗೂ ಇತರರು ಭಾಗವಹಿಸಿದ್ದರು.