ಚುನಾವಣೆಗಳಲ್ಲಿ ಹಣದ ಮೂಲಕ ಮತವನ್ನು ಕೇಳುವ ಸಂಸ್ಕೃತಿ ನಿಲ್ಲಬೇಕು ಹಣದ ಮೂಲಕ ಮತಗಳನ್ನು ಮಾರಿಕೊಳ್ಳವುದು ತಪ್ಪೆಂದು ನಮ್ಮ ರೈತರಿಗೆ ಅರಿವಾಗಬೇಕು. ಆ ಮೂಲಕ ರೈತರು ಸ್ವಾಭಿಮಾನದಿಂದ ಇರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಧ್ಯಕ್ಷ ಸಿದ್ದವೀರಪ್ಪ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಮಾಡದಕೆರೆ ಹೋಬಳಿ ತಿಮ್ಮಯ್ಯನ ಹಟ್ಟಿ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಮತನಾಡಿದರು.
“ಸರ್ಕಾರಗಳು ರೈತರಿಗೆ ಬೆಂಬಲ ಮತ್ತು ವೈಜ್ಞಾನಿಕ ಬೆಲೆ ನೀಡಿ, ಬ್ಯಾಂಕ್ ಹಾಗೂ ಇತರೆ ಕ್ಷೇತ್ರಗಳಲ್ಲಿ ರೈತರ ಸಾಲಕ್ಕೆ ರೈತರ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆ ತರಬೇಕು. ತಾನು ಬೆಳೆಯುವ ಬೆಳೆಗೆ ರೈತ ತಾನೇ ಬೆಲೆ ನಿರ್ಧರಿಸುವ ವ್ಯವಸ್ಥೆ ಜಾರಿಗೊಳಿಸಬೇಕು” ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಮಹೇಶ್ವರಪ್ಪ ಮಾತನಾಡಿ, “ಈ ಹಿಂದೆ ತಾಲೂಕಿನಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆದಿದ್ದು, ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿ ರೈತರಿಂದ ರಾಗಿಯನ್ನು ಖರೀದಿ ಮಾಡಲಾಗಿದೆ. ಅದರಲ್ಲಿ 6000ಕ್ಕೂ ಹೆಚ್ಚು ರೈತರ ರಾಗಿ ಖರೀದಿಗೆ ಹಣವನ್ನು ಸರ್ಕಾರದಿಂದ ಪಾವತಿಸಿಲ್ಲ. ಖರೀದಿಯಲ್ಲಿ ಕೂಡ ಬೆಂಬಲ ಬೆಲೆ ಎಂದು ಹೇಳಿ ಕೃಷಿ ನೀತಿ ಆಯೋಗ ಅಥವಾ ಸ್ವಾಮಿನಾಥನ್ ವರದಿಯ ಪ್ರಕಾರ ಬೆಂಬಲ ಬೆಲೆ ನೀಡಿಲ್ಲ” ಎಂದು ಆರೋಪಿಸಿದರು.
“ಕನಿಷ್ಠ ಬೆಲೆಯಲ್ಲಿ ರೈತರ ರಾಗಿಯನ್ನು ಖರೀದಿಸಿ ಈವರೆಗೂ ಬಿಲ್ ಪಾವತಿಸದೆ ಮಳೆಗಾಲ ಆರಂಭವಾಗುವ ಕಾಲದಲ್ಲಿ ರೈತರು ಬೀಜ, ಗೊಬ್ಬರ, ಮಕ್ಕಳ ಶೈಕ್ಷಣಿಕ ವೆಚ್ಚ ಸೇರಿದಂತೆ ಇತರೆ ವ್ಯವಸ್ಥೆಗಳಿಗೆ ಪರದಾಡುವಂತಾಗಿದೆ. ಅದರಿಂದ ಈ ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದು ಸಂಬಂಧಪಟ್ಟ ಇಲಾಖೆಯಿಂದ ರೈತರಿಗೆ ನೇರವಾಗಿ ಹಣಪಾವತಿ ಮಾಡಬೇಕು” ಎಂದು ಒತ್ತಾಯಿಸಿದರು.
“ರೈತರ ಬೇಡಿಕೆಗಳು ಈಡೇರದಿದ್ದಲ್ಲಿ ನೂತನ ಸರ್ಕಾರ ಮತ್ತು ಆಡಳಿತದ ವಿರುದ್ಧ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಿದ್ಯುತ್ ದರ ಏರಿಕೆ ವಿರೋಧಿಸಿ ಕೆಪಿಆರ್‌ಎಸ್ ಪ್ರತಿಭಟನೆ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಡಿ ಎಸ್ ಹಳ್ಳಿ ಮಲ್ಲಿಕಾರ್ಜುನ್, ಜಿಲ್ಲಾ ಕಾರ್ಯದರ್ಶಿ ಬಸವರಾಜಪ್ಪ, ಜಿಲ್ಲಾ ಉಪಾಧ್ಯಕ್ಷ ಮುರುಗೇಶಪ್ಪ, ಸದಾಶಿವಪ್ಪ, ಎಂ ಎಸ್ ಸ್ವಾಮಿ, ತಾಲೂಕು ಗೌರವಾಧ್ಯಕ್ಷ ಕರಿಯಪ್ಪ, ಗೊರವಿನಕಲ್ಲು ಮಹಿಳಾ ಅಧ್ಯಕ್ಷರು ಸಾವಿತ್ರಮ್ಮ ಮತ್ತು ಪಲ್ಲವಿ, ಶಿವಕುಮಾರ್ ಲಕ್ಷ್ಮಿದೇವರಹಳ್ಳಿ, ತಾಲೂಕು ಕಾರ್ಯದರ್ಶಿ ಶಿವಣ್ಣ, ರಂಗನಾಥ್, ತಾಲೂಕು ಕಾರ್ಯದರ್ಶಿ ಸತೀಶ್ ಇದ್ದರು.