ಚಿತ್ರದುರ್ಗ ನಗರದ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಐದು ಮಂದಿ ಸಾವನ್ನಪ್ಪಿದ್ದಾರೆ. ಹಲವರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಇಡೀ ಗ್ರಾಮವೇ ಆತಂಕದಲ್ಲಿ ದಿನಗಳನ್ನು ದೂಡಿದೆ. ಇದೀಗ, ಆರೋಗ್ಯ ಇಲಾಖೆಯು ಗ್ರಾಮದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದು, ‘ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರಂತೆ’ ಎಂಬಂತೆ ಇಲಾಖೆ ಕೆಲಸ ಮಾಡುತ್ತಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಚಿತ್ರದುರ್ಗ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯು ಮುಂಜಾಗ್ರತಾ ಕ್ರಮಗಳ ಕುರಿತು ಕವಾಡಿಗರ ಹಟ್ಟಿಯಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಿದೆ. “ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರು ಪಾಲಿಸುವುದರಿಂದ, ವಾಂತಿಭೇದಿ ಪ್ರಕರಣಗಳು ಹರಡದಂತೆ ತಡೆಗಟ್ಟಬಹುದು. ಊಟ ಮಾಡುವ ಮುನ್ನ, ಶೌಚಾಲಯ ಬಳಕೆ ಮಾಡಿದ ನಂತರ, ಸೋಪಿನಿಂದ ಕೈ-ಕಾಲುಗಳನ್ನು ತೊಳೆದುಕೊಳ್ಳಬೇಕು. ಬಿಸಿ ಬಿಸಿ ಆಹಾರ ಪದಾರ್ಥಗಳನ್ನು ಮಾತ್ರ ಸೇವನೆ ಮಾಡಬೇಕು. ತಂಗಳು
ತಡಿಗಳನ್ನ ತಿನ್ನಬಾರದು. ಹಣ್ಣು ತರಕಾರಿಗಳನ್ನ ಉಪ್ಪು ನೀರಿನಿಂದ ತೊಳೆದು ಉಪಯೋಗಿಸಬೇಕು. ಆಹಾರ ಪದಾರ್ಥಗಳ ಮೇಲೆ ನೊಣಗಳು ಕೂರದಂತೆ ಮುಚ್ಚಿಟ್ಟು ಬಳಸಬೇಕು. ಕುದಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಬೇಕು” ಎಂದು ಜಾಗೃತಿ ಮೂಡಿಸಿದೆ.