ನಟ ದರ್ಶನ್ ಅವರು ರೇಣುಕಸ್ವಾಮಿ ಕುಟುಂಬದವರನ್ನು ಭೇಟಿ ಮಾಡಿ ದುಡ್ಡು ಕೊಟ್ಟಿದ್ದು, ಅದರಲ್ಲಿ ಅವರು ಕಾರು ಬುಕ್ ಮಾಡಿದ್ದಾರೆ ಎಂಬ ಅನೇಕ ವದಂತಿಗೆ ಸಂಬಂಧಿಸಿದಂತೆ ರೇಣುಕಸ್ವಾಮಿ ತಂದೆ ಮತ್ತು ಕುಟುಂಬದವರು ಹೇಳಿಕೆ ನೀಡಿದ್ದು, ನಾವು ದರ್ಶನ್‌ನನ್ನು ಭೇಟಿ ಮಾಡಿಲ್ಲ, ಅವರೂ ನಮ್ಮನ್ನು ಭೇಟಿ ಮಾಡಿಲ್ಲ. ಅವರಿಂದ ಹತ್ತು ಪೈಸೆಯನ್ನೂ ಪಡೆದುಕೊಂಡಿಲ್ಲ. ಯಾರೋ ಕಿಡಿಗೇಡಿಗಳು ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ರಾಜ್ಯದ ಜನ ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ರೇಣುಕಸ್ವಾಮಿ ತಂದೆ ಮತ್ತು ಕುಟುಂಬದವರು ಸ್ಪಷ್ಟನೆ ನೀಡಿದ್ದಾರೆ.
ಚಿತ್ರದುರ್ಗದ ವಿಆರ್‌ಎಸ್ ಬಡಾವಣೆಯ ತಮ್ಮ ಮನೆಯಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕೆಲ ದಿನಗಳಿಂದ ಫೇಸ್‍ಬುಕ್‍ನಲ್ಲಿ ಹರಿಬಿಡಲಾಗಿದ್ದ ಊಹಾಪೋಹಗಳನ್ನು ನಂಬಬೇಡಿ. ನಮ್ಮ ಮನೆಯಲ್ಲಿರುವ ಹಳೆಯ ಸ್ಕೂಟರ್ ರಿಪೇರಿ ಮಾಡಿಸಲೂ ನಮ್ಮಲ್ಲಿ ಹಣವಿಲ್ಲ. ದಿಕ್ಕಿಲ್ಲದ ನಾವು ಹೊಸ ಕಾರು ಎಲ್ಲಿಂದ ಬುಕ್ ಮಾಡುವುದು. ಫೇಸ್‍ಬುಕ್ ಅಥವಾ ಸಾಮಾಜಿಕ ಜಾಲತಾಣದಲ್ಲಿ ವಿಜ್ಞಸಂತೋಷಿಗಳು ಇಲ್ಲಸಲ್ಲದ್ದನ್ನು ಬರೆದು ನಮಗೆ ನೋವು ಕೊಡಬೇಡಿ. ನೆಮ್ಮದಿಯಿಂದ ಬದುಕಲು ಬಿಡಿ” ಎಂದು ಕೊಲೆಯಾದ ಮನವಿ ಮಾಡಿದ್ದಾರೆ.
“ಶೆಡ್‍ಗೆ ಹೋಗಿ ನಾವು ನಟ ದರ್ಶನ್ ಅವರನ್ನು ಭೇಟಿ ಮಾಡಿದ್ದೇವೆ. ಅವರಿಂದ ಏನೋ ಪಡೆದುಕೊಂಡಿದ್ದೇವೆ ಎಂಬಂತೆ ಫೇಸ್‍ಬುಕ್‍ನಲ್ಲಿ ಪ್ರಚಾರವಾಗುತ್ತಿದೆ. ಕೈ ಮುಗಿದು ಕೇಳುತ್ತೇವೆ. ದಯಮಾಡಿ ಇಂಥದ್ದೆಲ್ಲಾ ಹಾಕಬೇಡಿ, ಈಗಾಗಲೇ ನಾವು ಸಾಕಷ್ಟು ನೊಂದಿದ್ದೇವೆ” ಎಂದು ಕಣ್ಣೀರು ಹಾಕಿದರು.
“ಜಾಮೀನು ರದ್ದು ಮಾಡಿಸಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿರುವುದನ್ನು ಸ್ವಾಗತಿಸುತ್ತೇವೆ. ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಗವಿಸಿದ್ಧೇಶ್ವರ ಜಾತ್ರೆ; ಈ ಬಾರಿ ಅನ್ನದಾಸೋಹದಲ್ಲಿ ಜಿಲೇಬಿ ಸಿಹಿ!
ರೇಣುಕಸ್ವಾಮಿ ಕುಟುಂಬದ ಸಂಬಂಧಿ ಹಾಗೂ ನಿವೃತ್ತ ಪ್ರಾಚಾರ್ಯ ಷಡಾಕ್ಷರಯ್ಯ ಮಾತನಾಡಿ, “ಶಿವನಗೌಡರ ಕುಟುಂಬ ಈಗಾಗಲೇ ಮಗನಿಲ್ಲದೇ ನೊಂದಿದೆ. ನೊಂದ ಜೀವಗಳಿಗೆ ಮತ್ತಷ್ಟು ನೋವು ಕೊಡುವ ಕೆಲಸವನ್ನು ಯಾರೂ ಮಾಡಬಾರದು. ನಟನ ಬಗ್ಗೆ ನಿಮಗೆ ಅಭಿಮಾನವಿದ್ದರೆ ಅದು ನಿಮ್ಮಲ್ಲೇ ಇರಲಿ. ಬೇರೆಯವರಿಗೆ ನೋವು ಕೊಡಬಾರದು” ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.
“ಕೊಲೆ ಆರೋಪಿಗೆ ಜಾಮೀನು ರದ್ದು ಕೋರಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆಂದರೆ ಪ್ರಕರಣದಲ್ಲಿ ಸತ್ಯಾಂಶ ಇದೆ ಎನ್ನುವ ಅರ್ಥ ಬರುತ್ತದೆ. ಈ ಹಿನ್ನೆಲೆಯಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಪ್ರಕರಣದ ವಿಚಾರಣೆ ನಡೆಸಲು ಸರ್ಕಾರಕ್ಕೆ ಮನವಿ ಮಾಡುತ್ತೇವೆ” ಎಂದರು.