ಹಳ್ಳಿಗಳಿಂದ ರಾಜ್ಯದ ಆಡಳಿತ ಎನ್ನುವ ಸಚಿವ ಕೃಷ್ಣಭೈರೇಗೌಡರು ಗ್ರಾಮೀಣ ಭಾಗದ ಜನರ ಜೀವನಾಡಿಗಳಾದ ಗ್ರಾಮ ಆಡಳಿತ ಅಧಿಕಾರಿಗಳನ್ನು ಬೀದಿಯಲ್ಲಿ ನಿಲ್ಲಿಸಿ ಯಾವ ಮಟ್ಟಿಗಿನ ಆಡಳಿತದಲ್ಲಿ ಸುಧಾರಣೆ ತರಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ನೇರವಾಗಿ ಪ್ರಶ್ನಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ಕಂದಾಯ ಅಧಿಕಾರಿಗಳು ಕೇಳುತ್ತಿರುವ ಕನಿಷ್ಠ ಬೇಡಿಕೆಗಳನ್ನು ಕಾನೂನು ಮತ್ತು ಮಾನವೀಯ ನೆಲಗಟ್ಟಿನಲ್ಲಿ ಈಡೇರಿಸಬೇಕಾಗುತ್ತದೆ. ಕುಳಿತುಕೊಳ್ಳಲು ಸ್ವಂತ ಕಚೇರಿ ಇಲ್ಲದೆ ಹಳ್ಳಿಗಳಲ್ಲಿರುವ ಅರಳಿ ಕಟ್ಟೆ, ಜಗಲಿಕಟ್ಟೆ, ಹಳೆಯ ಶಿಥಿಲ ಕಟ್ಟಡ, ದೇವಸ್ಥಾನದ ಆವರಣದಲ್ಲಿ ಕುಳಿತು ಕಂದಾಯ ದಾಖಲೆಗಳನ್ನು, ಗ್ರಾಮದ ಆಡಳಿತವನ್ನು ನಿರ್ವಹಣೆ ಮಾಡಬೇಕಾಗುವ ದುಃಸ್ಥಿತಿ ಬಂದಿದೆ” ಎಂದು ಕಿಡಿಕಾರಿದರು.
“ಅಧಿಕಾರಿಗಳಿಗೆ ಒಂದು ಸುಸಜ್ಜಿತ ಕಟ್ಟಡ ಕಟ್ಟಿಸಿಕೊಡಲು ಮನಸ್ಸು ಮಾಡಬೇಕು. ಒಂದೇ ಮೊಬೈಲ್‌ನಲ್ಲಿ ಸರ್ಕಾರದ ಹತ್ತಾರು ಆ್ಯಪ್‌ಗಳ ಕೆಲಸ ಮಾಡಲು ಕಷ್ಟಸಾಧ್ಯ. ಆದ್ದರಿಂದ ಅವರಿಗೆ ಟ್ಯಾಬ್, ಸ್ಕ್ಯಾನರ್, ಪ್ರಿಂಟರ್ ಇತ್ಯಾದಿ ಆಧುನಿಕ ಡಿಜಿಟಲ್ ತಂತ್ರಜ್ಞಾನಕ್ಕೆ ಸರಿಹೊಂದುವ ಸೌಲಭ್ಯಗಳನ್ನು ಕೊಡಬೇಕು. ಅಲ್ಲದೆ ಕಾಲಕಾಲಕ್ಕೆ ತಾಂತ್ರಿಕ ತರಬೇತಿ ಕೊಡಬೇಕು ಹುದ್ದೆಯನ್ನು ಮೇಲ್ದರ್ಜೆಗೇರಿಸಬೇಕು. ಪದೋನ್ನತಿ ಎನ್ನುವುದು ಅವರಿಗೆ ಮರೀಚಿಕೆಯಾಗಿದೆ. 20 ವರ್ಷಗಳಿಗೂ ಹೆಚ್ಚು ಕಾಲ ಒಂದೇ ಹುದ್ದೆಯಲ್ಲಿ ಮುಂದುವರಿಯುವ ಅನಿವಾರ್ಯ ಸ್ಥಿತಿಯಲ್ಲಿ ಮಾನಸಿಕವಾಗಿ ತೊಳಲಾಡುತ್ತಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಪೊಲೀಸ್ ಕಾರ್ಯಾಚರಣೆ; ಅಂತರಾಷ್ಟ್ರೀಯ ಗಾಂಜಾ ಆರೋಪಿಗಳ ಬಂಧನ
“ಈ ಸಮಸ್ಯೆಗಳು ಕೇವಲ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳಲ್ಲ. ಗ್ರಾಮೀಣ ಭಾಗದ ಜನರ ಭಾಗವೇ ಆಗಿರುವ ಇವರು ಸರಿಯಾದ ಸಮಯಕ್ಕೆ ಸರಿಯಾದ ಜಾಗದಲ್ಲಿ ನಮಗೆ ದಾಖಲೆಗಳನ್ನು ಒದಗಿಸದಿದ್ದರೆ ಹಳ್ಳಿಗಳ ಅಭಿವೃದ್ಧಿಯಾಗುವುದಿಲ್ಲ. ಆದ್ದರಿಂದ ದೇಶ ವಿದೇಶಗಳನ್ನು ಸುತ್ತಿ ಬಂದಿರುವ ತಾವುಗಳು ಅವರು ಕೇಳುವ ಬೇಡಿಕೆಗಳನ್ನು ಕಾನೂನು ಹಾಗೂ ಮಾನವಿಯ ನೆಲೆಗಟ್ಟಿನಲ್ಲಿ ಈಡೇರಿಸಬೇಕು” ಎಂದು ಸಚಿವ ಕೃಷ್ಣಭೈರೇಗೌಡ ಅವರಿಗೆ ಒತ್ತಾಯಿಸಿದರು.
“ಕಂದಾಯ ಅಧಿಕಾರಿಗಳ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅವರ ಪರವಾಗಿ ನಾವೂ ಕೂಡಾ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.