ಹೊಲದ ಬದುಗಳಲ್ಲಿ ಬೆಳೆದ ಕತ್ತಾಳೆಯಿಂದ ಅಥವಾ ಪಟ್ಟೆ ನಾರು ಉತ್ಪಾದಿಸಿ ಲಂಬಾಣಿ ಹಟ್ಟಿಯ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿಯ ಲಂಬಾಣಿ ಹಟ್ಟಿಯಲ್ಲಿ 15ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಕತ್ತಾಳೆ ಜೀವನ ಕಟ್ಟಿಕೊಟ್ಟಿದೆ.
ಮನಮೈನಹಟ್ಟಿ, ಚನಗಾನಹಳ್ಳಿ, ತಳಕುಗ್ರಾಮ ಅಲ್ಲದೆ, ಹೆಚ್ಚು ಕತ್ತಾಳೆ ಹಾಳೆ ಸಿಗುವ ಕುಷ್ಠಗಿ, ಕೊಪ್ಪಳ, ಬಳ್ಳಾರಿ, ಕನಕಗಿರಿ ಹಾಗೂ ಆಂಧ್ರಪ್ರದೇಶದ ನಾಗಿರೆಡ್ಡಿಪಲ್ಲಿಯಲ್ಲಿ ಕತ್ತಾಳೆ ನಾರು ಉತ್ಪಾದಿಸುವ ಘಟಕಗಳಿವೆ.
ಹೊಲದ ಬದುವಿನಲ್ಲಿ ಬೆಳೆದ ಕತ್ತಾಳೆಯ ಹಸಿ ಹಾಳೆಗಳನ್ನು ಕತ್ತರಿಸಿ ತಂದು ಯಂತ್ರಕ್ಕೆ ಹಾಕುತ್ತಾರೆ. ನಂತರ ನಾರನ್ನು ಬಿಸಿಲಿನಲ್ಲಿ ಒಣಗಿಸಿ ಟ್ರ್ಯಾಕ್ಟರ್ ಮೂಲಕ ಅದನ್ನು ತುಳಿಸಿ ಹಿಂಜಿಸಲಾಗುತ್ತದೆ. ನಂತರ ಅದು ಬಿಳಿ ನಾರಾಗುತ್ತದೆ.
ಟ್ರ್ಯಾಕ್ಟರ್ ಲೋಡ್ ಕತ್ತಾಳೆ ಹಾಳೆ ಬೆಲೆ 2,000 ರೂ.ದಿಂದ 3,000 ರೂ. ಇದೆ. ಈ ಜನ ಕೆಲವರಿಗೆ ಹಣದ ಬದಲಿಗೆ ತಾವು ಉತ್ಪಾದಿಸಿದ ನಾರು ನೀಡುತ್ತಾರೆ. ಪ್ರತಿದಿನ ಒಂದು ಯಂತ್ರದಲ್ಲಿ ನಾರು ಉತ್ಪಾದಿಸಲು ಕನಿಷ್ಠ 13ರಿಂದ 16 ಕಾರ್ಮಿಕರು ಕೆಲಸ ಮಾಡಬೇಕಾಗುತ್ತದೆ.
ಕತ್ತಾಳೆ ಹಸಿ ಹಾಳೆ ಯಂತ್ರಕ್ಕೆ ಹಾಕಿ ಎಳೆಯುವ ಮತ್ತು ನಾರಿನ ಗೊಬ್ಬರವನ್ನು ದೂರಕ್ಕೆ ಸಾಗಿಸುವ ಪುರುಷರಿಗೆ 600 ರೂ. ಮತ್ತು ಹಾಳೆ ಹೊತ್ತು ತರುವ ಮತ್ತು ನಾರನ್ನು ಬಿಸಿಲಿಗೆ ಒಣಗಿಸುವ ಮಹಿಳಾ ಕಾರ್ಮಿಕರಿಗೆ ಪ್ರತಿದಿನ 300ರಿಂದ 400 ರೂ. ಕೂಲಿ ನೀಡಲಾಗುತ್ತದೆ.
ಬೇಸಿಗೆಯಲ್ಲಿ ಮೂರ್ನಾಲ್ಕು ತಿಂಗಳು ಮಾತ್ರ ಈ ನಾರು ಉತ್ಪಾದಿಸುವ ಕೆಲಸ ಮಾಡುತ್ತಾರೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಈ ಕಾಮಗಾರಿಯನ್ನು ಯಂತ್ರದ ಮೂಲಕ ಮಾಡಿಸುತ್ತಾರೆ. ಹಾಗಾಗಿ ಇಲ್ಲಿ ಕೂಲಿಗೆ ಬರುವವರು ನಾರು ಉತ್ಪಾದಿಸುವ ಕೆಲಸ ಮುಗಿದ ನಂತರ ಕೂಲಿ ಅರಸಿ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಾರೆ.
ಲೋಡ್ ಹಾಳೆಗೆ 4ರಿಂದ 5 ಕ್ವಿಂಟಲ್ ನಾರು ದೊರೆಯುತ್ತದೆ. ಪ್ರತಿ ಕ್ವಿಂಟಲ್ ನಾರಿಗೆ 35,000ರಿಂದ 40,000 ರೂ. ಸಿಗುತ್ತದೆ. ಕತ್ತಾಳೆ ಹಾಳೆ, ವಾಹನ ಬಾಡಿಗೆ, ಡೀಸೆಲ್ ಹಾಗೂ 12 ಕಾರ್ಮಿಕರ ಕೂಲಿ ಸೇರಿ ದಿನಕ್ಕೆ 20,000 ಕಳೆದು 12,000 ಉಳಿಯುತ್ತದೆ ಎಂದು ಘಟಕದ ಮಾಲೀಕ ಲಂಬಾಣಿಹಟ್ಟಿ ಗ್ರಾಮದ ಎಸ್.ಕುಮಾರ ನಾಯ್ಕ ಮಾದ್ಯಮದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಕತ್ತಾಳೆಯ ನಿರುಪಯುಕ್ತ ರಸ ಮತ್ತು ವಾಸನೆಯಿಂದ ಹಲವು ರೋಗಗಳು ಹರಡುವ ಸಾಧ್ಯತೆ ಇದೆ. ಕತ್ತಾಳೆ ರಸ ಮೈಗೆ ಸೋಕಿದರೆ ಆ ಜಾಗದಲ್ಲಿ ವಿಪರೀತ ನವೆ ಜತೆಗೆ ಚರ್ಮರೋಗದ ಭೀತಿಕೂಡ ಈ ಕಾರ್ಮಿಕರನ್ನು ಕಾಡುತ್ತಿದೆ.
ಗುಡಿ ಕೈಗಾರಿಕೆಗೆ ಉತ್ತೇಜನ ನೀಡಲು ಸರ್ಕಾರಗಳು ಆರ್ಥಿಕ ನೆರವು ನೀಡಬೇಕು. ಹೊಲದ ಬದುಗಳಲ್ಲಿ ಕತ್ತಾಳೆ ಬೆಳೆಯಲು ರೈತರನ್ನು ಪ್ರೇರೇಪಿಸಬೇಕು. ಅರಣ್ಯ ಪ್ರದೇಶದಲ್ಲಿ ಕತ್ತಾಳೆ ಬೆಳೆದು ನಾರಿನ ಉದ್ಯಮಕ್ಕೆ ಕಚ್ಚಾವಸ್ತು ಪೂರೈಕೆ ಹೆಚ್ಚಿಸಲು ಸರ್ಕಾರ ಗಂಭೀರ ಚಿಂತನೆ ಮಾಡಬೇಕು ಎಂದು ಇಲ್ಲಿನ ಕಾರ್ಮಿಕರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.