ಮಾದಿಗ ಜನಾಂಗಕ್ಕೆ ಅಗತ್ಯವಾಗಿ ಬೇಕಾಗಿರುವ ಒಳಮೀಸಲಾತಿಯನ್ನು ಕೇವಲ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾತ್ರ ನೀಡಲು ಸಾಧ್ಯವಿರುವುದರಿಂದ ಮಾದಿಗ ಮೀಸಲಾತಿ ಹೋರಾಟ ಸಮಿತಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದೆ ಎಂದು ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಜಾತಿ ವರ್ಗೀಕರಣಕ್ಕಾಗಿ ಮಾದಿಗ ದಂಡೋರ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಎಸ್‌ಸಿ ವರ್ಗೀಕರಣ ಆಗಬೇಕೆಂದರೆ ಕೇಂದ್ರ ಸರ್ಕಾರದಿಂದ ಸಾಧ್ಯ. ಅದು ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಈ ಕೆಲಸ ಸಾಧ್ಯ. ಕಾರಣ ಕೇಂದ್ರದ ಬಿಜೆಪಿ ಸರ್ಕಾರ ಎಸ್‌ಸಿ ಮೀಸಲಾತಿಗೆ ಅನುಕೂಲವಾಗಿ ಕೆಲಸ ಮಾಡುತ್ತ ಬಂದಿದೆ. ಪ್ರಧಾನಿ ಮೋದಿ ಅವರು ನಮಗೆ ಮಾತು ಕೊಟ್ಟಿದ್ದಾರೆ. ಮೋದಿಯಿಂದ ನಮ್ಮ ಹೋರಾಟ ವೇಗ ಪಡೆದಿದ್ದು, ನಮ್ಮ ಹೋರಾಟಕ್ಕೆ ಗೆಲುವು ಸಿಗುತ್ತದೆಂಬ ವಿಶ್ವಾಸದಲ್ಲಿದ್ದೇವೆ. ಹಾಗಾಗಿ ಮಾದಿಗ ಹೋರಾಟ ಸಮಿತಿ ಬಿಜೆಪಿಗೆ ಬೆಂಬಲ ನೀಡುತ್ತಿದೆ” ಎಂದರು.
“ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ನಾವು ಶಕ್ತಿ ಮೀರಿ ಕೆಲಸ ಮಾಡುತ್ತೇವೆ. ನಮ್ಮ ಬೆಂಬಲ ಕೇವಲ ಚಿತ್ರದುರ್ಗಕ್ಕೆ ಮಾತ್ರ ಸೀಮಿತ ಅಲ್ಲ. ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ. ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಎಲ್ಲ ಕಡೆ ಕೆಲಸ ಮಾಡುತ್ತೇವೆ. ಮಾದಿಗ ಸಮುದಾಯ ಎಲ್ಲೆಲ್ಲಿದೆಯೋ ಅಲ್ಲೆಲ್ಲ ಗೆಲುವಿಗೆ ಶ್ರಮಿಸುತ್ತೇವೆ” ಎಂದರು.
“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರುಗಳೇ ಒಳಮೀಸಲಾತಿಯನ್ನು ತಡೆ ಹಿಡಿಯಲಿದ್ದಾರೆ. ಛಲವಾದಿಗಳಾದ ಕಾಂಗ್ರೆಸ್ ಪಕ್ಷದ ಮಲ್ಲಿಕಾರ್ಜುನ್ ಖರ್ಗೆ ಅವರೇ ಇದನ್ನು ತಡೆಯುತ್ತಾರೆ. ಮೀಸಲಾತಿಯನ್ನು ವಿರೋಧ ಮಾಡುವವರು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಜನರಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸದಾಶಿವ ಆಯೋಗ ವರದಿಯನ್ನು ನಿರ್ಲಕ್ಷ್ಯ ವಹಿಸಿದೆ. ಎಸ್ ಎಂ ಕೃಷ್ಣ, ಸಿದ್ದರಾಮಯ್ಯ ಸಿಎಂ ಇದ್ದಾಗ ವರದಿ ಬಹಿರಂಗ ಮಾಡಿಲ್ಲ. ಇದು ಒಳಮೀಸಲಾತಿ ವಿರೋಧಿತನ ತೋರಿಸುತ್ತದೆ ಎಂದು ದೂರಿದ ಅವರು, 30 ವರ್ಷದ ಹೋರಾಟಕ್ಕೆ ನ್ಯಾಯ ಸಿಗಬೇಕೆಂದರೆ ಮೋದಿ ಪ್ರಧಾನಿ ಆಗಬೇಕು” ಎಂದರು.
“ಕಾರಜೋಳ ಮಾದಿಗ ಸಮುದಾಯದ ಪ್ರಬಲ ನಾಯಕ. ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಉಪ ಮುಖ್ಯಮಂತ್ರಿ ಆಗಿದ್ದವರು ಕಾರಜೋಳ. ಅವರು ಗೆದ್ದರೆ ಕೇಂದ್ರದಲ್ಲಿ ನಮ್ಮ ಹೋರಾಟಕ್ಕೆ ಇನ್ನಷ್ಟು ಬಲ ಸಿಗುತ್ತದೆ. ಕೇಂದ್ರದಲ್ಲಿ ಕಾರಜೋಳ ಮಂತ್ರಿ ಆದರೆ ನಮಗೆ ನ್ಯಾಯ ಸಿಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ನೇಹಾ ಕೊಲೆ ಪ್ರಕರಣ | ಎನ್‌ಕೌಂಟರ್ ಜಾರಿಯಾಗಬೇಕು: ಸಚಿವ ಸಂತೋಷ್ ಲಾಡ್
“ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆದರೆ ಸಂವಿಧಾನ ಬದಲಾವಣೆ ಮಾಡುತ್ತಾರೆಂಬ ಆರೋಪ ಮಾಡುತ್ತಿದ್ದಾರೆ. ಮೋದಿ ಆಡಳಿತದಲ್ಲಿ ವೈಫಲ್ಯ ಇದ್ದರೆ ಅದನ್ನು ಮಾತನಾಡಲಿ. ಕಾಂಗ್ರೆಸ್ ಏನು ಸಿಗದಿದ್ದಕ್ಕೆ ಈ ಸಂವಿಧಾನ ಬದಲಾವಣೆ ಆರೋಪ ಮಾಡುತ್ತಿದ್ದಾರೆ, ಇದು ಸರಿಯಲ್ಲ. ಸಂವಿಧಾನವೇ ಭಗವದ್ಗೀತೆ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ. 500 ವರ್ಷಗಳ ರಾಮಮಂದಿರದ ಕನಸನ್ನು ಮೋದಿ ನನಸು ಮಾಡಿದ್ದಾರೆ. ನರೇಂದ್ರ ಮೋದಿ ಒಬಿಸಿ ವರ್ಗಕ್ಕೆ ಸೇರಿದ ವ್ಯಕ್ತಿ ಆಗಿದ್ದು, ಮಹಿಳೆಯರಿಗೆ ಸಮಾನ ಹಕ್ಕು ನೀಡಿದ್ದರೆ ಅದು ಮೋದಿ ಮಾತ್ರ” ಎಂದು ಬಣ್ಣಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ದಾಸಪ್ಪ, ಮೋಹನ್, ಕರಿಕೇರೆ ತಿಪ್ಪೇಸ್ವಾಮಿ, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಪರುಶುರಾಮ್ ಸೇರಿದಂತೆ ಇತರರು ಇದ್ದರು.
