ಮೊಳಕಾಲ್ಮೂರಿನಲ್ಲಿ ಇತ್ತೀಚೆಗೆ ನಡೆದ ಬಿಜೆಪಿಯ ಸಭೆಯಲ್ಲಿ ಮೋರ್ಚಾ ಅಧ್ಯಕ್ಷ ತಿಪ್ಪೇಸ್ವಾಮಿ ಅವರು ಮಾತನಾಡುತ್ತ, “ನಮ್ಮ ಕ್ಷೇತ್ರದಲ್ಲಿ ಹಣ ಇಲ್ಲದಿದ್ದರೆ ಚುನಾವಣೆ ನಡೆಯುವುದಿಲ್ಲ, ಪ್ರತಿ ಪಕ್ಷದವರು ಮತದಾರರಿಗೆ ₹500 ನೀಡಿದರೆ, ನಾವು ಅದಕ್ಕಿಂತ ಹೆಚ್ಚಾಗಿ ನೀಡಬೇಕಿದೆ” ಎಂದಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದು, ಈ ಬಗ್ಗೆ ಚುನಾವಣೆ ಆಯೋಗ ಕ್ರಮಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಶಿವುಯಾದವ್ ಒತ್ತಾಯಿಸಿದ್ದಾರೆ.
ಬಿಜೆಪಿಯವರ ಮಾತು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, “ವಿರೋಧ ಪಕ್ಷದವರು ನೀಡಿದಕ್ಕಿಂತ ಹೆಚ್ಚಿನ ಹಣವನ್ನು ನಮ್ಮ ಕ್ಷೇತ್ರದಲ್ಲಿ ನೀಡಬೇಕು” ಎಂದು ತಿಳಿಸಿದ್ದಾರೆ. ಇದರ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಂಡು, ಹೀಗೆ ಮಾತಾಡಿದವರು ಹಾಗೂ ಬಿಜೆಪಿ ಅಭ್ಯರ್ಥಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈವರೆಗೂ ಚುನಾವಣಾ ಆಯೋಗ ಏನು ಕ್ರಮ ಕೈಗೊಂಡಿಲ್ಲ. ಇದು ಚುನಾವಣಾ ಆಯೋಗವನ್ನು ತಲುಪಿಲ್ಲವೇ ಅಥವಾ ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸವನ್ನು ಮಾಡುತ್ತಿದೆಯಾ? ಎಂಬ ಅನುಮಾನ ಮೂಡಿಸುವಂತಿದೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಂಗಾರಪ್ಪ ಸೋಲಿಗೆ ನ್ಯಾಯ ಕಂಡುಕೊಳ್ಳಬೇಕಿದೆ: ಶಾಸಕ ಬೇಳೂರು ಗೋಪಾಲಕೃಷ್ಣ
“ಚುನಾವಣೆಯನ್ನು ಗೆಲ್ಲಲೇಬೇಕೆಂಬ ಹಠದಲ್ಲಿರುವ ಬಿಜೆಪಿ ವಾಮಮಾರ್ಗದಲ್ಲಿ ಗೆಲುವನ್ನು ಸಾಧಿಸಲು ಹೂರಟಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದರ ಬಗ್ಗೆ ಚುನಾವಣಾ ಆಯೋಗ ಗಮನ ನೀಡಬೇಕಿದೆ. ಬಿಜೆಪಿ ಪದಾಧಿಕಾರಿಗಳ ಮೇಲೆ ನಿಗಾವನ್ನು ಇರಿಸಲು ಕಣ್ಣಾವಲು ಸಮಿತಿ ರಚಿಸಬೇಕು. ವಿಡಿಯೋದಲ್ಲಿ ಮಾತನಾಡಿರುವ ತಿಪ್ಪೇಸ್ವಾಮಿ ಮತ್ತು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇದರ ಬಗ್ಗೆ ಕೂಲಂಕುಷವಾಗಿ ತನಿಖೆಯಾಗಬೇಕು” ಎಂದು ಒತ್ತಾಯಿಸಿದ್ದಾರೆ.
