ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬಯಲು ಸೀಮೆಗೆ ನೀರು ಹರಿಸುವ ಭದ್ರಾ ಮೇಲ್ದಂಡೆ ಯೋಜನೆ ಕಳೆದ 15 ವರ್ಷಗಳಿಂದ ಗ್ರಹಣ ಹಿಡಿದು ಕುಳಿತಿದೆ. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ರೈತ ಹೋರಾಟಗಾರ ಕಸವನಹಳ್ಳಿ ಪ್ರಕಾಶ್ ಕಿಡಿಕಾರಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಬಯಲು ಸೀಮೆಗೆ ನೀರು ಹರಿಸುವ ಭದ್ರ ಮೇಲ್ದಂಡೆ ಯೋಜನೆ ಕಳೆದ 15 ವರ್ಷಗಳಿಂದ ಗ್ರಹಣ ಹಿಡಿದು ಕುಳಿತಿದೆ. ಭದ್ರಾ ಮೇಲ್ದಂಡೆ ಪ್ಯಾಕೇಜ್ ಒಂದರ 12 ಕಿ.ಮೀ ಮಾಡಲು 15 ವರ್ಷವಾದರೂ ಸಾಧ್ಯವಾಗಿಲ್ಲ. ಖಾಯಂ ಆಗಿ ಬೀಡು ಬಿಟ್ಟಿರುವ ಇಂಜಿನಿಯರ್‌ಗಳು ಕೆಲಸ ಮಾಡದೆ ಆಯಕಟ್ಟಿನ ಜಾಗದಲ್ಲಿ ಕುಳಿತಿದ್ದಾರೆ ಎಂದರು.
ರಾಜ್ಯ ಸರ್ಕಾರ ಮೇಲ್ದಂಡೆ ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುವ ಅವಶ್ಯಕತೆ ಇಲ್ಲ. ಮತ್ತು ಎಲ್ಲಾ ಸರ್ಕಾರಗಳು ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇವಲ ಚುನಾವಣಾ ಗಿಮಿಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ನೀರು ಹರಿಸುತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯನ್ನು ಎತ್ತಿನಹೊಳೆಯಲ್ಲಿ ಮುಳುಗಿಸುತ್ತಾರೆ ಎನ್ನುವ ಆತಂಕ ಶುರುವಾಗಿದೆ ಎಂದರು.
ಬೆಸ್ಕಾಂ ಇಲಾಖೆಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿರುವ ಅಕ್ರಮ ಸಕ್ರಮ ಯೋಜನೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಬೆಸ್ಕಾಂ ಇಲಾಖೆ ಅಧಿಕಾರಿಗಳು ಕೂಡಲೇ ಪರಿಹರಿಸಿಕೊಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷರಾದ ಗಡಾರಿ ಕೃಷ್ಣಪ್ಪ ಎಚ್ಚರಿಕೆ ನೀಡಿದರು.
ವಿವಿಧ ಇಲಾಖೆಗಳಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಕ್ರಿಯಾ ಯೋಜನೆಯ ಪಟ್ಟಿಮಾಡಿ ಸಂಘಟನೆಯಿಂದ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾತ್ರಿಕೇನಹಳ್ಳಿ ತಿಳಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಚಂದ್ರಗಿರಿ, ತಾಲೂಕು ಕಾರ್ಯಕಾರಿಣಿ ಜಯಣ್ಣ, ಪುಟ್ಟರಾಜು, ಸುಬ್ರಮಣಿ, ಜಯಪ್ರಕಾಶ್, ಕಾಳಿದಾಸ್, ರಾಮಚಂದ್ರ, ಅವಿನಾಶ್ , ತಿಪ್ಪೇಸ್ವಾಮಿ, ಕುಬೇರಪ್ಪ, ಸುದರ್ಶನ್ ಉಪಸ್ಥಿತರಿದ್ದರು.