ಆಮೆಯನ್ನು ಪೂಜಿಸಿದರೆ ಅದೃಷ್ಟ ಖುಲಾಯಿಸುತ್ತದೆ ಎಂಬ ಮೂಡನಂಬಿಕೆ ಜನರಲ್ಲಿ ಬೇರೂರಿದೆ. ಹೀಗಾಗಿ, ಅಳಿವಿನ ಅಂಚಿನಲ್ಲಿರುವ ನಕ್ಷತ್ರ ಆಮೆಗಳ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಇಂತದ್ದೇ ಒಂದು ಪ್ರಕರಣ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಹೊಸದುರ್ಗ ತಾಲೂಕಿನ ಕಂಚೀಪುರ ಸಮೀಪದ ಕುದುರೆ ಕಣಿವೆ ಗುಡ್ಡಗಾಡು ಪ್ರದೇಶದಲ್ಲಿ ನಕ್ಷತ್ರ ಆಮೆಗಳನ್ನು ಹಿಡಿಯುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಬಳಿ ಇದ್ದ32 ನಕ್ಷತ್ರ ಆಮೆಗಳನ್ನು ರಕ್ಷಣೆ ಮಾಡಿದ್ದಾರೆ.
ಕಂಚಿಪುರ ಗ್ರಾಮದ ಹೊರ ವಲಯದಲ್ಲಿ ಶನಿವಾರ ವಾಹನವನ್ನು ನಿಲ್ಲಿಸಿಕೊಂಡು ಅನುಮಾನಸ್ಪದವಾಗಿ ಓಡಾಡುತ್ತಿದ್ದ ಅಪರಿಚಿತರನ್ನು ಗಮನಿಸಿದ ಸ್ಥಳಿಯರು ಶ್ರೀರಾಂಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, ನಕ್ಷತ್ರ ಆಮೆಗಳನ್ನು ಬೇಟಿಯಾಡುತ್ತಿದ್ದರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಚಿಕ್ಕಬಳ್ಳಾಪುರ ಮೂಲದ ಮೂವರು ಹಾಗೂ ಕೋಲಾರ ಮೂಲದ ಒಬ್ಬ ಸೇರಿ ಒಟ್ಟು ನಾಲ್ವರಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಲಯ ಅರಣ್ಯಧಿಕಾರಿ ಸುನಿಲ್‍ಕುಮಾರ್, “ಮಾರಿಕಣಿವೆ ಹಾಗೂ ಲಕ್ಕಿಹಳ್ಳಿ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ನಕ್ಷತ್ರ ಆಮೆಗಳಿದ್ದು ಅಳಿವಿನ ಅಂಚಿನಲ್ಲಿವೆ. ನಮ್ಮ ಜನರಲ್ಲಿದ್ದು ಇವುಗಳು ವಿಷ್ಣುವಿನ ವಾಹನಗಳು ಎಂಬ ನಂಬಿಕೆ ಇದೆ. ಅವುಗಳನ್ನು ಮನೆಯಲ್ಲಿ ಪೂಜಿಸಿದರೆ ಒಳ್ಳೆಯದಾಗುವುದೆಂಬ ನಂಬಿಕೆ ಇರುವುದರಿಂದ ಇವುಗಳಿಗೆ ಹೆಚ್ಚಿನ ಬೇಡಿಕೆ ಇದೆ ಹಾಗಾಗಿ. ಇವುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತದೆ. ಈ ಪ್ರಭೇದದ ಪ್ರಾಣಿಗಳು ಅಳಿವಿನ ಅಂಚಿನಲ್ಲಿರುವುದರಿಂದ ಇವುಗಳನ್ನು ಸಂರಕ್ಷಿಸುವುದು ಎಲ್ಲರ ಹೊಣೆಯಾಗಿದೆ” ಎಂದು ಹೇಳಿದ್ದಾರೆ.
ವಶಕ್ಕೆ ಪಡೆಯಲಾದ 32 ನಕ್ಷತ್ರ ಆಮೆಗಳನ್ನು ಚಿತ್ರದುರ್ಗದ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಸಂರಕ್ಷಣೆ ಮಾಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.