ರಾಜ್ಯದಲ್ಲಿ ಲಕ್ಷಾಂತರ ಮಂದಿ ರೈತರು ಬಗರ್ ಹುಕುಂ ಭೂಮಿಯ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದು, ಸರ್ಕಾರದ ಗಮನಸೆಳೆಯಲು ಇವರೆಲ್ಲರ ಹೋರಾಟ ಅಗತ್ಯವಿದೆ ಎಂದು ಪ್ರಜಾಶಕ್ತಿ ವೇದಿಕೆ ಬೋರಯ್ಯ ಅಭಿಪ್ರಾಯಪಟ್ಟರು.
ಚಿತ್ರದುರ್ಗ ಜಿಲ್ಲಾ ಬಗರ್ ಹುಕುಂ ಸಾಗುವಳಿದಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಸಕ್ರಮ ಸಾಗುವಳಿದಾರರ ಪಹಣಿ, ಸಾಗುವಳಿ ಪತ್ರ ವಿತರಣೆಗೆ ಸಂಬಂಧಿಸಿದಂತೆ ಮುಂದಿನ ಹೋರಾಟಗಳ ಬಗ್ಗೆ ರೂಪುರೇಷೆಗಳನ್ನು ನಿರ್ಧರಿಸುವ ಅಗತ್ಯವಿದೆ. ಬಗರ್ ಹುಕುಂ ಅರ್ಜಿಗಳಿಗೆ ಸಂಬಂಧಿಸಿದಂತೆ ಜಿಲ್ಲೆ, ತಾಲೂಕು ಮತ್ತು ರಾಜ್ಯದ ಕಂದಾಯ ಇಲಾಖೆಯ ಅಂಕಿ ಅಂಶಗಳಲ್ಲಿ ಲೋಪ ದೋಷಗಳಿವೆ. ತಾಲೂಕು ಮಟ್ಟದ ಸಮಿತಿಗಳು ನಾಮಕಾವಸ್ತೆ ಅಂಕಿ ಅಂಶಗಳನ್ನು ತೋರಿಸುತ್ತಿವೆ. ನೈಜ ಸಕ್ರಮ ಸಾಗುವಳಿದಾರರಿಗೆ ಸಾಗುವಳಿ ಚೀಟಿ, ಪಹಣಿ ವಿತರಣೆ ಕೆಲಸವಾಗುತ್ತಿಲ್ಲ. ಈ ಬಗ್ಗೆ ಮುಖ್ಯ ಅಂಕಿ ಅಂಶಗಳನ್ನು ಕ್ರೂಢೀಕರಿಸಿ ಮುಂದಿನ ಹೋರಾಟಕ್ಕೆ ಸಿದ್ಧರಾಗಿ, ಸಕ್ರಮ ರೈತರ ಸಾಗುವಳಿ ಪಹಣಿಗೆ ಹೋರಾಟ ಮಾಡಬೇಕಿದೆ” ಎಂದು ಕರೆ ನೀಡಿದರು.

ಸಭೆಯಲ್ಲಿ ನವಯಾನ ಬುದ್ಧ ಸಂಘದ ಮುಖ್ಯಸ್ಥ ಪ್ರೊ. ಸಿ ಕೆ ಮಹೇಶ್ವರಪ್ಪ ಮಾತನಾಡಿ, “ಭೂಮಿ ಸೇರಿದಂತೆ ಉದ್ದಿಮೆಗಳು ಕೇಂದ್ರೀಕೃತವಾಗದೆ ರಾಷ್ಟ್ರೀಕರಣವಾಗಬೇಕು ಎಂಬುದು ಸಂವಿಧಾನದಲ್ಲಿ ಉಲ್ಲೇಖವಾಗಿದೆ. ಸಾಮೂಹಿಕ ಬೇಸಾಯ ಪದ್ಧತಿ ಜಾರಿಯಲ್ಲಿರಬೇಕು. ಅದರಿಂದ ಬಂದ ಉತ್ಪನ್ನಗಳನ್ನು ಎಲ್ಲ ವರ್ಗದ ಜಾತಿ ಧರ್ಮದ ಜನ ಹಂಚಿಕೊಂಡು ತಿನ್ನಬೇಕು. ಇದು ಅಂಬೇಡ್ಕರ್ ಅವರ ಆಶಯವಾಗಿತ್ತು. ಭೂಮಿ ಎನ್ನುವುದು ಒಂದು ಕೇಂದ್ರೀಕೃತ ವ್ಯವಸ್ಥೆಯಾಗುತ್ತದೆ. ಇದನ್ನು ಕೇಂದ್ರವಾಗಿಟ್ಟುಕೊಂಡು ಅದರ ಒಡೆತನವನ್ನು ಸಾಧಿಸಿದವರು ಆರ್ಥಿಕ, ರಾಜಕೀಯವಾಗಿ ಸಬಲರಾಗುತ್ತಾರೆ. ಹೀಗಾಗಿಯೇ ಕೃಷಿ ಭೂಮಿ ಸಮಾನ ಹಂಚಿಕೆಯಾಗಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಮುಂದಿನ ದಿನಗಳಲ್ಲಿ ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲ ವರ್ಗದವರಿಗೂ ಸಮಾನ ಕೃಷಿ ಭೂಮಿ ಹಂಚಿಕೆಯಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ?: ಚಿತ್ರದುರ್ಗ | ಸಾಣೆಹಳ್ಳಿ ಶ್ರೀ ವಿರಚಿತ ‘ಮೋಳಿಗೆ ಮಾರಯ್ಯ’ ಕಿರುನಾಟಕ ಯಶಸ್ವಿ ಪ್ರದರ್ಶನ
ಸಭೆಯಲ್ಲಿ ಮಾಧ್ಯಮ ಅಕಾಡೆಮಿ ಸದಸ್ಯ ಪತ್ರಕರ್ತ ಆಹೋಬಲಪತಿ, ಹೊಳೆಯಪ್ಪ, ರಾಜಣ್ಣ ಲಕ್ಷ್ಮಿಸಾಗರ, ದಸಂಸದ ದುರುಗೇಶ್, ಗೋನೂರು ಹನುಮಂತಪ್ಪ, ಮದಕರಿಪುರ ಸೂರಣ್ಣ, ನೆಲಗೇತನಹಟ್ಟಿ ಬೋರಯ್ಯ, ಹಿರಿಯೂರು ಹುಸೇನ್, ಯಾದವ್ ಹೊಸದುರ್ಗ, ಚಿಕ್ಕುಳ್ಳಾರ್ತಿ ತಿಪ್ಪಯ್ಯ, ನಿಂಗಪ್ಪ, ಗೌನಹಳ್ಳಿ ಈರಣ್ಣ ಕರಿಯಪ್ಪ ಮತ್ತು ಚಿತ್ರದುರ್ಗ ಜಿಲ್ಲೆಯ ಎಲ್ಲ ತಾಲೂಕಿನ ನೂರಾರು ಅರಣ್ಯ ಮತ್ತು ಬಗರ್ ಹುಕುಂ ಸಾಗುವಳಿದಾರರು ಇದ್ದರು.
