ನರಬಲಿ ಕೊಟ್ಟರೆ ನಿಧಿ ದೊರೆಯುತ್ತದೆ ಎಂದು ವಾಮಾಚಾರಿಯೊಬ್ಬ ಹೇಳಿದ್ದು, ಆತನ ಮಾತನ್ನು ನಂಬಿದ ಇಬ್ಬರು ಆಸೆಬುರುಕ ದುರುಳರು ತಮ್ಮ ಪರಿಯಸ್ಥನನ್ನು ಕರೆದೊಯ್ದು ಬಲಿ ಹೆಸರಿನಲ್ಲಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ಘಟನೆ ನಡೆದಿದೆ. ವಾಮಾಚಾರಿ ರಾಮಕೃಷ್ಣ ಮತ್ತು ಆನಂದ ರೆಡ್ಡಿ ಎಂಬವರು ಕೃತ್ಯ ಎಸಗಿದ್ದಾರೆ. ಈ ಇಬ್ಬರು ದುರುಳರು ತಮಗೆ ಪರಿಚಯವಿದ್ದ, ಚಪ್ಪಲಿ ಹೊಲೆಯುವ ಕೆಲಸ ಮಾಡುತ್ತಿದ್ದ ಪ್ರಭಾಕರ್ ಎಂಬವರನ್ನು ಕರೆದೊಯ್ದು, ಕೊಲೆ ಮಾಡಿದ್ದಾರೆ.
ಆನಂದ ರೆಡ್ಡಿಗೆ ವಾಮಾಚಾರಿ ರಾಮಕೃಷ್ಣ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ನರಬಲಿ ಕೊಟ್ಟರೆ ನಿಧಿ ಸಿಗುತ್ತದೆ ಎಂದು ಆಮಿಷವೊಡ್ಡಿದ್ದಾನೆ. ಆತನ ಮೌಢ್ಯದ ಆಮಿಷಕ್ಕೆ ಒಳಗಾಗಿ ಆನಂದ ರೆಡ್ಡಿ ತನಗೆ ಪರಿಚಯವಿದ್ದ ಪ್ರಭಾಕರ್‌ನನ್ನು ಡ್ರಾಪ್ ಕೊಡುವ ನೆಪದಲ್ಲಿ ಕೊರೆದೊಯ್ದು, ಬಲಿ ಹೆಸರಿನಲ್ಲಿ ಹತ್ಯೆ ಮಾಡಿದ್ದಾರೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಆನಂದ ರೆಡ್ಡಿ ಮೂಲತಃ ಆಂಧ್ರಪ್ರದೇಶದ ಕಲ್ಯಾಣದುರ್ಗ ಬಳಿಯ ಕುಂದುರ್ಪಿ ಗ್ರಾಮದವನು. ಆತ ಕರ್ನಾಟಕದಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ, ಜಿಲ್ಲೆಗಳಿಂದ ಜಿಲ್ಲೆಗಳಿಗೆ ಓಡಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.