ಯಾವುದೇ ಸಮುದಾಯಗಳು ಮುಂದುವರೆಯಬೇಕೆಂದರೆ ಶಿಕ್ಷಣದಲ್ಲಿ ಮುಂದೆ ಬರಬೇಕು. ಶಿಕ್ಷಣದಲ್ಲಿ ಜಾಗೃತಿ ಇರಬೇಕು. ಶಿಕ್ಷಣವಿಲ್ಲದೇ ಸಮಾಜಗಳು ಏಳಿಗೆಯಾಗುವುದಿಲ್ಲ. ಇತ್ತೀಚೆಗೆ ಹಿಂದುಳಿದ ಸಮುದಾಯಗಳಲ್ಲಿಯೂ ಶಿಕ್ಷಣದ ಬಗ್ಗೆ ಜಾಗೃತಿಯಾಗುತ್ತಿದೆ ಎಂದು ಕನಕ ಗುರುಪೀಠದ ಈಶ್ವರಾನಂದಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ತಾಲೂಕು ಕನಕ ನೌಕರರ ಕ್ಷೇಮಾಭಿವೃದ್ದಿ ಸಂಘ ಹಾಗೂ ಜಿಲ್ಲಾ ಕುರುಬರ ಸಂಘದಿಂದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ 2023-2024ನೇ ಸಾಲಿನಲ್ಲಿ ಕುರುಬ ಸಮಾಜದ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
“ನಮ್ಮ ಸಮುದಾಯದಲ್ಲಿ ಅನೇಕ ಪ್ರತಿಭಾವಂತರಿದ್ದರೂ ಸಮಾಜ, ಸಂಘಸಂಸ್ಥೆಗಳು ಹಾಗೂ ಸಂಘಟನೆಗಳು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಹಿಂದೆ ಬಿದ್ದಿವೆ. ತಾತ್ಸಾರ ಮನೋಭಾವನೆ ಬೇಡ. 2002ರಲ್ಲಿ ಆರಂಭಗೊಂಡ ಪ್ರತಿಭಾ ಪುರಸ್ಕಾರ ಇಲ್ಲಿಯವರೆಗೂ ಪ್ರತಿ ವರ್ಷ ನಿರಂತರವಾಗಿ ನಡೆದುಕೊಂಡು ಬರುತ್ತಿದೆ” ಎಂದು ತಿಳಿಸಿದರು.

“ನಮ್ಮ ಸಮುದಾಯದಲ್ಲಿ ಬಡವರಿರಬಹುದು. ಆದರೆ ಪ್ರತಿಭಾವಂತರಿಗೆ ಕೊರತೆಯಿಲ್ಲ. ಅಂತಹವರನ್ನು ಗುರುತಿಸಿ ಬೆಳಕಿಗೆ ತರುವ ಕೆಲಸವಾಗಬೇಕು. ಇದಕ್ಕೆ ಹೆಚ್ಚಿನ ನೆರವು ಅಗತ್ಯವಿದೆ. ಪ್ರತಿಯೊಬ್ಬರೂ ಆರ್ಥಿಕ ನೆರವು ನೀಡಿದರೆ ಪ್ರತಿ ವರ್ಷವೂ ದೊಡ್ಡ ಮಟ್ಟದಲ್ಲಿ ಪ್ರತಿಭೆಗಳಿಗೆ ಸಹಾಯವಾಗಲಿದೆ” ಎಂದು ಮನವಿ ಮಾಡಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ತಪ್ಪು ಮಾಡದಿದ್ದರೂ ಅಧಿಕಾರಿಗಳು ವಿನಾಕಾರಣ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಕುತಂತ್ರ ಮಾಡುತ್ತಿದ್ದಾರೆ.ಹಾಗಾಗಿ ನೈತಿಕವಾಗಿ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಲ್ಲಬೇಕು. ದ್ವೇಷ ಅಸೂಯೆ ಬಿಟ್ಟು ಮೊದಲು ಸಂಘಟಿತರಾಗಿ ಧರ್ಮ, ದೇಶ ಕಾಯುವ ಸಮರ್ಥ ಮಕ್ಕಳನ್ನು ತಯಾರು ಮಾಡಿ” ಎಂದು ಕುರುಬ ಜನಾಂಗದವರಿಗೆ ಸ್ವಾಮೀಜಿ ಕರೆ ನೀಡಿದರು.
ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಮಾತನಾಡಿ, “ಪ್ರತಿ ಮಗುವಿನಲ್ಲಿರುವ ಪ್ರತಿಭೆ ಗುರುತಿಸುವ ಕೆಲಸ ಮಾಡಬೇಕು. ಅಂಕಗಳು ಮಾನದಂಡವಾಗುವ ಬದಲು ಸಾಮರ್ಥ್ಯವನ್ನು ಗುರುತಿಸಬೇಕು. ಮಕ್ಕಳಿಗೆ ಗುರು ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಬೇಕು. ಇಂದು ಮಕ್ಕಳು ಮೊಬೈಲ್, ಫೇಸ್‌ಬುಕ್, ವಾಟ್ಸಾಪ್ ವ್ಯಾಮೋಹಕ್ಕೆ ಒಳಗಾಗುತ್ತಿದ್ದು, ಪೋಷಕರು, ಶಿಕ್ಷಕರು ಅದರಿಂದ ಅವರನ್ನು ಹೊರತರಬೇಕು” ಎಂದು ಸಲಹೆ ನೀಡಿದರು.
ಜಿಲ್ಲಾ ಕುರುಬರ ಸಂಘದ ಕಾರ್ಯದರ್ಶಿ ಬಿ ಟಿ ಜಗದೀಶ್ ಮಾತನಾಡಿ, “ಡಾ.ಅಂಬೇಡ್ಕರ್ ಅವರ ಘೋಷವಾಕ್ಯದಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಎಲ್ಲ ಸಮಾಜಗಳು ಒತ್ತುಕೊಡಬೇಕು. ಬಡತನ ದಾರಿದ್ರ್ಯದಿಂದ ಹೊರಬರಲು ಶಿಕ್ಷಣವೊಂದೇ ದಾರಿ. ಅದರಿಂದ ಶಿಕ್ಷಣದ ಬಗ್ಗೆ ಜಾಗೃತಿ ಹೊಂದಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷೆ ರಜಿನಿ ಲೇಪಾಕ್ಷಿ, ಕುರುಬರ ಸಂಘದ ಮಹಿಳಾಧ್ಯಕ್ಷೆ ಎನ್ ಎಂ ಪುಷ್ಪವಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಪ್ರಸಾದ್, ಡಾ. ರೇಖಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್ ಸೇರಿದಂತೆ ಇತರ ಮುಖಂಡರು ಹಾಗೂ ಸಮಾಜ ಬಾಂಧವರು ಇದ್ದರು.