ಕರ್ನಾಟಕಾದ್ಯಂತ ಅಲೆಮಾರಿ ಸಮುದಾಯಗಳು ಪ್ರಸ್ತುತದಲ್ಲಿಯೂ ಟೆಂಟ್‌ಗಳಲ್ಲಿ ವಾಸವಾಗಿದ್ದು, ಟೆಂಟ್ ಮುಕ್ತ ರಾಜ್ಯವಾಗಬೇಕಾದ ಅಗತ್ಯವಿದೆ. ನಿರಂತರವಾಗಿ ನಿರ್ಲಕ್ಷ್ಯಕ್ಕೊಳಪಟ್ಟಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳಿಗೆ ಸರ್ಕಾರದಿಂದ ಭೂಮಿ, ವಸತಿ ಮತ್ತು ನಾಗರಿಕ ಸೌಲಭ್ಯಗಳು ಸಿಕ್ಕಾಗ ಶೋಷಣೆಗೆ ಒಳಗಾಗಿರುವ ಜನಾಂಗದವರು ನೆಮ್ಮದಿ ಬದುಕು ಕಾಣಲು ಸಾಧ್ಯವಾಗುತ್ತದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ ಎಸ್ ದ್ವಾರಕಾನಾಥ್ ಹೇಳಿದರು.
ಚಿತ್ರದುರ್ಗ ಭಾರತ್ ಸೇವಾದಳ ಸಭಾಂಗಣದಲ್ಲಿ ಅಲೆಮಾರಿ ಸಮುದಾಯ ಮತ್ತು ಕರ್ನಾಟಕ ರಾಜ್ಯ ಅಲೆಮಾರಿ, ಬುಡಕಟ್ಟು ಮಹಾಸಭಾ, ವಿಮುಕ್ತಿ ವಿದ್ಯಾ ಸಂಸ್ಥೆ ಹಾಗೂ ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಅಲೆಮಾರಿಗಳ ಸಮಸ್ಯೆ ಮತ್ತು ಸವಾಲು” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ಸರ್ಕಾರ ಅಲೆಮಾರಿ ಸಮುದಾಯದ ನೆರವಿಗೆ ಧಾವಿಸಬೇಕು. ಅಲೆಮಾರಿ ಜನಾಂಗದವರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸಂದರ್ಶನವಿಲ್ಲದೆ, ವಸತಿಯುತ ಶಾಲೆಗಳಲ್ಲಿ ಮಕ್ಕಳಿಗೆ ಅವಕಾಶ ಕಲ್ಪಿಸುವುದು ಸೇರಿದಂತೆ ಸರ್ಕಾರ ಹೆಚ್ಚು ಆದ್ಯತೆ ನೀಡಿದರೆ ಅಲೆಮಾರಿಗಳೂ ಕೂಡ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ” ಎಂದರು.
ಸಾಮಾಜಿಕ ಕಾರ್ಯಕರ್ತ ಎಪಿಡಿ ಸಂಸ್ಥೆಯ ಉಪನಿರ್ದೇಶಕ ಬಾಬು ಎಸ್ ಮಾತನಾಡಿ, “ಅಲೆಮಾರಿ ಸಮುದಾಯದಲ್ಲಿ ನಿರ್ಲಕ್ಷ್ಯಕ್ಕೊಳಗಾದವರು ಮತ್ತು ಅಲೆಮಾರಿ ಜನಾಂಗದ ವಿಶೇಷಚೇತನರಿಗೆ ಆದತ್ಯೆ ನೀಡಬೇಕಾದ ಅಗತ್ಯತೆ ಇದೆ. ಅಲೆಮಾರಿಗಳಲ್ಲಿಯೂ ಅಲೆಮಾರಿ ವಿಶೇಷಚೇತನರು ಈಗಲೂ ಹಿಂದುಳಿದ್ದಾರೆ. ಇವರನ್ನು ಸಂಘಟಿತರಾಗಿಸುವ ಕೆಲಸಗಳಾಗಬೇಕಿದೆ. ವಿಶೇಷ ಚೇತನರ ಅಗತ್ಯತೆಗಳ ಬಗ್ಗೆ ಗಮನ ಹರಿಸಲು ವಿವರವಾದ ಅಧ್ಯಯನ ನಡೆಸಲು ಸರ್ಕಾರ ಮುಂದಾಗಬೇಕಿದೆ” ಎಂದರು.
ಕೊರೊನಾ ಸಾಂಕ್ರಾಮಿಕ ಅವಧಿಯಲ್ಲಿ ದಿ ಅಸೋಸಿಯೇಷನ್ ಆಫ್ ದಿ ಪೀಪಲ್ ವಿತ್ ಡಿಸೆಬಿಲಿಟಿ(ಎಪಿಡಿ) ವತಿಯಿಂದ ಸಾವಿರಾರು ಅಲೆಮಾರಿ ಕುಟುಂಬಗಳಿಗೆ ಪಡಿತರ ಕಿಟ್ ನೀಡಿದರ ಕುರಿತು ಅವರು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಬೆಳೆಹಾನಿ ಸಮೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ
ಅಲೆಮಾರಿ ಸಮುದಾಯದವರ ಸಮಸ್ಯೆ ಮತ್ತು ಸವಾಲುಗಳ ಕುರಿತ ಸಂವಾದಗೋಷ್ಠಿಯಲ್ಲಿ ಅಲೆಮಾರಿ ಮತ್ತು ಬುಡಕಟ್ಟು ಮಹಾಸಭಾದ ಅಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿ ನಾಗರಾಜ್, ದಾವಣಗೆರೆ ಮುಖಂಡರುಗಳಾದ ತಿಪ್ಪೇಶಪ್ಪ, ತಿಪ್ಪಣ್ಣ, ಅಲೆಮಾರಿ ಸಮುದಾಯದ ಮುಖಂಡರಾದ ಕೆ ಎಂ ನಾಗರಾಜ್, ಬಾಬು, ಕಮಲಹಾಸನ್, ಧನಂಜಯ, ಸಿಳ್ಳೆಕ್ಯಾತರ ಸಂಘಟನೆಯ ಕೃಷ್ಣಪ್ಪ, ಬುಡ್ಗ ಜಂಗಮ ಜನಾಂಗದ ಮುಖಂಡರಾದ ಗುರುಮೂರ್ತಿ, ಸಣ್ಣಹುಸೇನಿ, ವಕೀಲರು ಮತ್ತು ಅಲೆಮಾರಿ ಸಂಘಟನೆ ಮುಖಂಡ ಪ್ರತಾಪ್ ಜೋಗಿ, ಕೊರಚ ಸಮುದಾಯದ ಜಿಲ್ಲಾ ಅಧ್ಯಕ್ಷ ವೈ.ಕುಮಾರ್, ಅಲೆಮಾರಿ ಸಂಘಟನೆಯ ಮಹಿಳಾ ಮುಖಂಡರು, ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್, ಹನೀಪ್ ಕೋಟೆ, ಧಮ್ಮ ಸಾಂಸ್ಕೃತಿಕ ಕೇಂದ್ರ ಅರಣ್ಯ ಸಾಗರ್ ಸೇರಿದಂತೆ ಇತರರು ಇದ್ದರು.