ಒಳಮೀಸಲಾತಿಯನ್ನು ಜಾರಿಗೊಳಿಸಲು ರಾಜ್ಯಗಳಿಗೆ ವಿವೇಚನಾಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಒಳಮೀಸಲಾತಿಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಹಿರಿಯೂರು ಘಟಕ ಅಕ್ಟೋಬರ್ 3ರಂದು ತಾಲೂಕಿನ ಪಟ್ರೆಹಳ್ಳಿಯಿಂದ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಸರ್ಕಿಟ್ ಹೌಸ್‌ನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಘಟಕದ ಮುಖಂಡ ರಾಮಚಂದ್ರ ಮಾತನಾಡಿ, “ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಒಳಮೀಸಲಾತಿ ಅನುಷ್ಠಾನಗೊಳಿಸುವ ವಿವೇಚನಾ ಅಧಿಕಾರವಿದೆಯೆಂದು ನೀಡಿರುವ ಮಹತ್ವದ ತೀರ್ಪು ಸ್ವಾಗತಾರ್ಹ. ಈ ತೀರ್ಪು, ಆದೇಶ ಹೊರಬಿದ್ದು ತಿಂಗಳುಗಳೇ ಕಳೆದರೂ ರಾಜ್ಯ ಸರ್ಕಾರ ಈ ಬಗ್ಗೆ ಮೌನವನ್ನು ಪ್ರದರ್ಶಿಸುತ್ತಿದೆ. ಇದನ್ನು ಜಾರಿಗೊಳಿಸಬೇಕಾಗಿದ್ದ ರಾಜ್ಯ ಸರ್ಕಾರ ಕುಂಟುನೆಪ ಹೇಳುತ್ತಿದೆ. ಯಾವುದೇ ನೆಪಗಳನ್ನು ಹೇಳದೆ ಈ ಕೂಡಲೇ ರಾಜ್ಯದಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೆ ತರಬೇಕು” ಎಂದು ಒತ್ತಾಯಿಸಿದರು.
“ಜಿಲ್ಲೆಯಲ್ಲಿರುವ ದಲಿತ ಸಂಘಟನೆಗಳು ಪ್ರತಿ ಊರು ಕೇರಿಗಳಲ್ಲಿ, ಹಟ್ಟಿಗಳಲ್ಲಿ ನೆಲೆಸಿರುವ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಎಲ್ಲ ತಾಲೂಕುಗಳಿಂದ ಸಾವಿರಾರು ಜನರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಮತ್ತು ಎಚ್ಚರಿಕೆ ನೀಡುವ ಸಲುವಾಗಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ದಲಿತರಿಗೆ ಬಹಿಷ್ಕಾರ ಪ್ರಕರಣ; ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಇದೇ ವೇಳೆ ಸಭೆಯಲ್ಲಿ ತಾಲೂಕುಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನಿಯೋಜಿಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಮುಖಂಡರಾದ ಮೊಹಮ್ಮದ್ ಮೊಹಿಸಿನ್, ರಾಘವೇಂದ್ರ ವೈ, ಮುಜಾಯಿದ್, ಗೋವಿಂದಪ್ಪ, ತಿಪ್ಪೇಸ್ವಾಮಿ, ಓಂಕಾರಪ್ಪ, ಸುರೇಶ್, ಪ್ರವೀಣ್, ಚಿದಾನಂದ್, ಇದಾಯತ್, ಅಕ್ಬರ್ ಅಲಿ, ಮಹಿಳಾ ಮುಖಂಡರಾದ ಲಕ್ಷ್ಮೀದೇವಿ, ಶಶಿಕಲಾ, ರೇಖಾ, ರತ್ನಮ್ಮ, ಕರಿಯಮ್ಮ, ಶಾರದಮ್ಮ, ಹಾಗೂ ಇತರ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು.