ಪಾರ್ಥಸಾರಥಿ ಪಕ್ಷಭೇದ ಮರೆತು ನಾಡಿನಾದ್ಯಂತ ಸುತ್ತಾಡಿ ಎಲ್ಲರೊಂದಿಗೂ ಸಂಪರ್ಕವಿಟ್ಟುಕೊಂಡಿದ್ದರು. ದಲಿತರಲ್ಲಿ ಒಳಮೀಸಲಾತಿ ಕುರಿತು ಜಾಗೃತಿ ಮೂಡಿಸಿ, ಹೋರಾಟಕ್ಕೆ ಚುರುಕು ನೀಡಿದರು” ಎಂದು ಎಂಆರ್‌ಎಚ್‌ಎಸ್ ರಾಜ್ಯ ಕಾರ್ಯದರ್ಶಿ ರಾಯಚೂರಿನ ಅಂಬಣ್ಣ ಅರೋಲಿಕರ್ ಪ್ರಶಂಸೆ ವ್ಯಕ್ತಪಡಿಸಿದರು.
ಚಿತ್ರದುರ್ಗದ ಪಾರ್ಥಸಾರಥಿ ಗೆಳೆಯರ ಬಳಗದಿಂದ ರೋಟರಿ ಬಾಲಭವನದಲ್ಲಿ ಆಯೋಜಿಸಿದ್ದ ನಾನು ಕಂಡಂತೆ ಪಾರ್ಥಸಾರಥಿ ನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಪಂಜಾಬ್, ಹರಿಯಾಣ, ತಮಿಳುನಾಡು, ಕರ್ನಾಟಕ, ಆಂಧ್ರದಲ್ಲಿ ಹೋರಾಟ ತೀವ್ರಗೊಂಡ ಪರಿಣಾಮ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೆನೆಪದರ ವಿಚಾರ ಬೇಡ. ಏಕೆಂದರೆ ಸರ್ಕಾರ ಕೆನೆಪದರ ಮುಂದಿಟ್ಟುಕೊಂಡು ಒಳಮೀಸಲಾತಿ ಜಾರಿಗೊಳಿಸುವುದನ್ನು ತಡ ಮಾಡುಬಹುದು” ಎಂದರು.
“ಒಳಮೀಸಲಾತಿಯನ್ನು ಪಡೆದೇ ಪಡೆಯುತ್ತೇವೆಂಬ ಗಟ್ಟಿ ನಿರ್ಧಾರ ಪಾರ್ಥಸಾರಥಿಯವರದಾಗಿತ್ತು. ದಲಿತರಿಗಾಗುತ್ತಿರುವ ಅನ್ಯಾಯವನ್ನು ಎಲ್ಲಿ ಬೇಕಾದರೂ ಯಾರಿಗೆ ಬೇಕಾದರೂ ವಿವರಿಸಿ ಮನವರಿಕೆ ಮಾಡಿಕೊಡುವ ತಾಕತ್ತು ಅವರಲ್ಲಿತ್ತು. ಐಎಎಸ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳ ಜೊತೆ ಒಳಮೀಸಲಾತಿ ವಿಚಾರವಾಗಿ ಚರ್ಚೆ ನೆಡೆಸುತ್ತಿದ್ದರು. ಹೋರಾಟ, ಕಾಲ್ನಡಿಗೆ, ಜಾಥ ಮೂಲಕ ದಲಿತರಲ್ಲಿ ಸಂಚಲನ ಮೂಡಿಸಿದ ಪಾರ್ಥಸಾರಥಿಯ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ಆದರೆ ಮೈಮರೆತು ಕುಳಿತುಕೊಳ್ಳಬಾರದು. ʼಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯಗಳಿಗಿದೆʼಯೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದ್ದರಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಶೀಘ್ರ ಒಳಮೀಸಲಾತಿ ಜಾರಿಯಾಗುವಂತೆ ನೋಡಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.
“ಕೆನೆಪದರದ ಕುತಂತ್ರಕ್ಕೆ ಬಲಿಯಾಗುವುದು ಬೇಡ. ಒಳಮೀಸಲಾತಿಯನ್ನು ತೆಗೆದುಕೊಳ್ಳುವುದಕ್ಕೆ 75 ವರ್ಷ ಬೇಕಾಯಿತಾ? ಸುಪ್ರೀಂ ಕೋರ್ಟ್ ತೀರ್ಪಿನಿಂದ ಮಾದಿಗರಿಗೆ, ಶೋಷಿತರಿಗೆ ಗೆಲುವು ಸಿಕ್ಕಂತಾಗಿದೆ. ಇದೊಂದು ನ್ಯಾಯಯುತವಾದ ಹೋರಾಟ. ರಾಜ್ಯ ಸರ್ಕಾರ ಜಾರಿಗೊಳಿಸುತ್ತದೆಂಬ ನಂಬಿಕೆಯಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟದ ನಿರ್ದೇಶಕ ಡಾ. ಶಿವಾನಂದ ಕೆಳಗಿನಮನಿ ಮಾತನಾಡಿ, “ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದ ಪ್ರೊ.ಬಿ.ಕೃಷ್ಣಪ್ಪನವರ ಅಧ್ಯಯನ ಪೀಠ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪನೆಯಾಗಬೇಕೆಂದು ಮೊದಲು ಧ್ವನಿಯೆತ್ತಿದ್ದೇ ಪಾರ್ಥಸಾರಥಿ. ವಿಶ್ವವಿದ್ಯಾಲಯಗಳ ಮೇಷ್ಟ್ರುಗಳಿಗೂ ಇಲ್ಲದಷ್ಟು ಅರಿವು, ತಿಳುವಳಿಕೆ ಆತನಲ್ಲಿತ್ತು. ಕರ್ನಾಟಕದ ಚರಿತ್ರೆಯನ್ನು ತುದಿ ನಾಲಿಗೆಯಲ್ಲಿರಿಸಿಕೊಂಡಿದ್ದ” ಎಂದು ಹೋರಾಟದ ಹಾದಿಯನ್ನು ನೆನಪಿಸಿದರು.
“ಪಾರ್ಥಸಾರಥಿಯಲ್ಲಿ ಸಾಂಸ್ಕೃತಿಕ ನಾಯಕರನ್ನು ಬೆಳಕಿಗೆ ತರುವ ಹಂಬಲದೊಟ್ಟಿಗೆ ಸೂಕ್ಷ್ಮ ಸಂವೇದನೆಯಿತ್ತು. ಸಮಾಜದ ಹಿತಕ್ಕಾಗಿ ದುಡಿಯುವ ಆತನ ಪ್ರಯತ್ನ ಪ್ರಾಮಾಣಿಕ ಹೋರಾಟವಾಗಿತ್ತು” ಎಂದು ಹೇಳಿದರು.
ಹೋರಾಟಗಾರ ದಲಿತ ಸಂಘರ್ಷ ಸಮಿತಿ ದಾವಣಗೆರೆಯ ಬಿ ಎಂ ಹನುಮಂತಪ್ಪ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಡಾ ಟಿ ತಿಪ್ಪೇಸ್ವಾಮಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಸಾಗುವಳಿ ಭೂಮಿ ಕಬಳಿಸಲು ಕೆಐಎಡಿಬಿ ಹುನ್ನಾರ; ಕರ್ನಾಟಕ ಪ್ರಾಂತ ರೈತ ಸಂಘ ಆರೋಪ
ಈ ಸಂದರ್ಭದಲ್ಲಿ ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಚಳ್ಳಕೆರೆ ನಗರಸಭೆ ಮಾಜಿ ಸದಸ್ಯ ಎಂ ಶಿವಮೂರ್ತಿ, ನ್ಯಾಯವಾದಿಗಳಾದ ಶರಣಪ್ಪ, ಬೀಸ್ನಳ್ಳಿ ಜಯಣ್ಣ, ಸಿ ಮುನಿಸ್ವಾಮಿ, ಡಾ ಎಂ ಶ್ರೀನಿವಾಸ್‍ಮೂರ್ತಿ, ಮಂಡ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಡಾ ಬರಗೂರಪ್ಪ, ಡಾ ಮಂಜುನಾಥ್, ನಿವೃತ್ತ ಉಪನ್ಯಾಸಕ ಚಂದ್ರಣ್ಣ ಬೆಳ್ಳಿಪಟ್ಲು, ಶಿಕ್ಷಣ ಇಲಾಖೆಯ ಡಾ ಹಂಪಿಲಿಂಗಯ್ಯ, ಎಂಆರ್‌ಎಚ್‌ಎಸ್ ಜಿಲ್ಲಾಧ್ಯಕ್ಷ ಹುಲ್ಲೂರು ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ ಪಿ ಪ್ರಕಾಶ್ ಮೂರ್ತಿ, ಡಾ. ಬಿ ಆರ್ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ ಪಿ ತಿಪ್ಪೇಸ್ವಾಮಿ ಇದ್ದರು.