ಕಾರಟಗಿ ಪಿಎಸ್‌ಐ ಪರಶುರಾಮ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ತಹಶೀಲ್ದಾರ್ ಮೂಲಕ ಗೃಹಸಚಿವ ಜಿ ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ಮುಖಂಡರು ಮಾತನಾಡಿ, “ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಪರಶುರಾಮ್ ಅವರಿಗೆ ವಿನಾಕಾರಣ ವರ್ಗಾವಣೆಗಳನ್ನು ಮಾಡಿದ್ದು ಮತ್ತು ನಿಯೋಜಿತ ಠಾಣೆಯ ಕರ್ತವ್ಯದಲ್ಲಿ ಮುಂದುವರೆಯಲು ಸ್ಥಳೀಯ ಶಾಸಕರು ಮತ್ತು ಅವನ ಬೆಂಬಲಿಗರು 30 ಲಕ್ಷ ರೂಪಾಯಿಗಳಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪಗಳು ಕೇಳಿಬಂದಿವೆ. ಇದರಿಂದ ಒತ್ತಡಕ್ಕೊಳಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಅನುಮಾನಗಳು ಅಲ್ಲಿನ ಸ್ಥಳೀಯರು, ಪತ್ನಿ ಮತ್ತು ಕುಟುಂಬದವರಿಂದ ಕೇಳಿಬಂದಿದ್ದು ಈಗ ಎಲ್ಲ ಕಾರಣಗಳಿಂದ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಪರಿಶೀಲಿಸಿ ಸೂಕ್ತ ತನಿಖೆ ನಡೆಸಿ ಅವರ ಸಾವಿಗೆ ನ್ಯಾಯ ಕೊಡಿಸಬೇಕು” ಎಂದು ಒತ್ತಾಯಿಸಿದರು.
ಪ್ರಕರಣದಲ್ಲಿ ಹೆಸರಿಸಿರುವ ಆರೋಪಿಗಳನ್ನು ಕೂಡಲೇ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ದಲಿತರು, ದಲಿತ ಮಹಿಳೆಯರು ಮತ್ತು ದಲಿತ ಅಧಿಕಾರಿಗಳ ಮೇಲೆ ಪದೇ ಪದೆ ದೌರ್ಜನ್ಯದಂತಹ ಪ್ರಕರಣಗಳು ವರದಿಯಾಗುತ್ತಿದ್ದು, ರಕ್ಷಣೆ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಇವರಿಗೆ ಸೂಕ್ತ ರಕ್ಷಣೆ ನೀಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಪಿಎಸ್‌ಐ ಪರಶುರಾಮ್ ಸಾವು ಪ್ರಕರಣ; ಆರೋಪಿಗಳ ಬಂಧನಕ್ಕೆ ಛಲವಾದಿ ಮಹಾಸಭಾ ಆಗ್ರಹ
ಈ ಸಂದರ್ಭದಲ್ಲಿ ರಾಜ್ಯಕಾರ್ಯದರ್ಶಿ ಹಾಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷ ರಾಮಚಂದ್ರ ಕೆ, ಹಿರಿಯೂರು ತಾಲೂಕು ಅಧ್ಯಕ್ಷ ರಾಘವೇಂದ್ರ ಆರ್, ಜಿಲ್ಲಾ ಉಪಾಧ್ಯಕ್ಷ ಶಿವರಾಜಕುಮಾರ್, ತಾ. ಗೌರವಾಧ್ಯಕ್ಷ ಗೋವಿಂದಪ್ಪ, ತಾ. ಕಾರ್ಯಾಧ್ಯಕ್ಷ ಸಾಧಿಕ್ (ಚನ್ನಗಿರಿ) ತಾ. ಉಪಾಧ್ಯಕ್ಷರುಗಳಾದ ಲಕ್ಷ್ಮಣ್ ರಾವ್, ಗಿರೀಶ್, ಹೊಸಹಳ್ಳಿ ಗ್ರಾಮ ಶಾಖೆ ಅಧ್ಯಕ್ಷ ವೀರೇಂದ್ರ, ದಲಿತ ಮುಖಂಡರುಗಳಾದ ರಾಘವೇಂದ್ರ ವಿ, ಮಂಜುನಾಥ್, ಬುಡೆನ್ ಅಲಿ ಸೇರಿದಂತೆ ಇತರರು ಇದ್ದರು.