ರಿಸರ್ವ್ ಬ್ಯಾಂಕ್, ಲೀಡ್ ಬ್ಯಾಂಕ್ ನಿಯಮ ಉಲ್ಲಂಘಿಸಿ ರೈತರ ಸಾಲ ವಸೂಲಿ ಮಾಡಿರುವ ಬ್ಯಾಂಕ್ ಅಧಿಕಾರಿಗಳ ಅಮಾನತು, ತನಿಖೆಗೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲೆಯ ರೈತ ಸಂಘ ಮತ್ತು ಹಸಿರು ಸೇನೆ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿತು.
“ಚಿತ್ರದುರ್ಗ ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಲೀಡ್ ಬ್ಯಾಂಕ್ ಮಾರ್ಗ ಸೂಚಿಯನ್ನು ಧಿಕ್ಕರಿಸಿ ರೈತರಿಗೆ ಮತ್ತು ಸಾರ್ವಜನಿಕರಿಗೆ ದ್ರೋಹ ಬಗೆಯುತ್ತಾ ವಸೂಲಿಯಲ್ಲಿ ಕ್ರೂರ ನೀತಿ ಅನುಸರಿಸಿ ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ” ಎಂದು ರೈತಸಂಘದ ಮುಖಂಡರು ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ರೈತಸಂಘದ ಪದಾಧಿಕಾರಿಗಳು ಸಭೆ ನಡೆಸಿ ಕೆಲವು ನಿರ್ಣಯಗಳನ್ನು ಅಂಗೀಕರಿಸಿ, ಶೀಘ್ರ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಕೆ ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.

‘ಕೆನರಾ ಬ್ಯಾಂಕ್‌ನಲ್ಲಿ ಬೆಳೆಸಾಲ ಪಡೆದಿದ್ದ ರೈತರ ಖಾತೆಗೆ ಜಮಾ ಆಗುವ ಸರ್ಕಾರದ ಸಹಾಯ ಧನವನ್ನು ಸಾಲಕ್ಕೆ ಸಂದಾಯ ಮಾಡುತ್ತಿದ್ದಾರೆ. ರೆಡ್ಡಿ ಬಿಲ್ಡಿಂಗ್ ಕೆನರಾ ಬ್ಯಾಂಕ್ ಸೇರಿದಂತೆ, ಬ್ಯಾಂಕ್ ಅಧಿಕಾರಿಗಳು ಕೆಲ ಸುಸ್ತಿದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಖಾಸಗಿ ಬ್ಯಾಂಕುಗಳು ರಿಸರ್ವ್ ಬ್ಯಾಂಕ್, ಲೀಡ್ ಬ್ಯಾಂಕ್‌ನ ನಿಯಮಾವಳಿಗಳನ್ನು ಉಲ್ಲಂಘಿಸಿ ರೈತರ ರಕ್ತ ಹೀರುತ್ತಿದ್ದು, ಸುಸ್ತಿದಾರರ ಅಡಮಾನದ ಬೆಲೆ ಬಾಳುವ ವಸ್ತುಗಳನ್ನು ನೋಟಿಸ್ ನೀಡದೇ ಅಕ್ರಮವಾಗಿ ಕಾಲು ಭಾಗದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ರೈತ ಸಂಘ ಒತ್ತಾಯಿಸಿದೆ.
‘ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಹಾಗೂ ಖಾಸಗಿ ಬ್ಯಾಂಕ್‌ಗಳು ಮಾರ್ಗಸೂಚಿ ಮೀರಿ ಸಾಲ ವಸೂಲಾತಿಗೆ ದೌರ್ಜನ್ಯದಿಂದ ಹರಾಜು, ನೋಟೀಸ್, ಜಪ್ತಿಗಳಂತಹ ಕ್ರೂರ ಕೃತ್ಯಕ್ಕೆ ಇಳಿದಿದ್ದಾರೆ. ಈ ಎಲ್ಲ ಬ್ಯಾಂಕ್‌ಗಳು ವಸೂಲಿ, ದೌರ್ಜನ್ಯವನ್ನು ನಿಯಂತ್ರಿಸಬೇಕಿದ್ದ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮೌನವಾಗಿ ನೋಡುತ್ತಾ ಕುಳಿತಿದ್ದಾರೆ. ಇದರಿಂದ ಸಾಲಗಾರರು ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಷ್ಟಕಾಲಕ್ಕೆ ರೈತರ ಬದುಕಿಗೆ ಆಸರೆ ಆಗುವಂತೆ ನೀಡುವ ಸಬ್ಸಿಡಿಗಳನ್ನು ಸಾಲಕ್ಕೆ ಜಮಾ ಮಾಡುತ್ತಿದ್ದು, ಅಂತಹ ಹಣವನ್ನು ಎಲ್ಲ ಬ್ಯಾಂಕುಗಳು ಖಾತೆದಾರರಿಗೆ ಹಿಂದಿರುಗಿಸಿಬೇಕು. ಈ ವಿಷಯಗಳ ಬಗ್ಗೆ ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ಅನ್ನದಾತನ ನೆರವಿಗೆ ಧಾವಿಸಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಬಗ್ಗೆ ರೈತಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಡಿಎಸ್ ಮಲ್ಲಿಕಾರ್ಜುನ್ ಮಾತನಾಡಿದ್ದು, “ಕೆನರಾ ಬ್ಯಾಂಕ್ ನಲ್ಲಿ ಬೆಳೆಸಾಲ ಪಡೆದಿದ್ದ ರೈತರಿಂದ ಅವರ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿ, ಆ ಖಾತೆಗೆ ಬರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಳೆವಿಮೆ, ಬೆಳೆ ಪರಿಹಾರ, ಸಬ್ಸಿಡಿ ಹಣ, ಮಹಿಳೆಯರ ಮಾಸಾಶನ, ಕಿಸಾನ್ ಸಮ್ಮಾನ್ ಹಣ, ಮಳಿಗೆ ಬಿದ್ದ ಪರಿಹಾರ, ಮನೆಯ ಅನುದಾನ, ಉದ್ಯೋಗ ಖಾತ್ರಿ ಯೋಜನೆ ಕೂಲಿ ಹಣವನ್ನು ಸಾಲ ತೀರುವಳಿಗೆ ಜಮಾ ಮಾಡಿಕೊಳ್ಳಲಾಗುತ್ತಿದೆ. ಸುಸ್ತಿ ರೈತರಿಗೆ ಬೆದರಿಕೆ ಒಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಶಿಕ್ಷಣ ಮಾನವನ ವಿಕಾಸದ ಹೆದ್ದಾರಿ: ನ್ಯಾ.ಸಮೀರ್ ಪಿ ನಂದ್ಯಾಲ್
ರಾಜ್ಯ ಉಪಾಧ್ಯಕ್ಷರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ “ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿದಂತೆ ಐಸಿಐಸಿಐ, ಎಚ್‌ಡಿಎಫ್‌ಸಿ, ಸುಕೋ, ಕರ್ನಾಟಕ ಸೇರಿದಂತೆ ಇತರೆ ಖಾಸಗಿ ಬ್ಯಾಂಕ್‌ಗಳು ನಿಯಮಾವಳಿಗಳನ್ನು ಗಾಳಿಗೆ ತೂರಿ ರೈತರ ಸುಸ್ತಿಯಾದ ಜಮೀನು, ಬಂಗಾರ ಇತರ ಬೆಲೆಬಾಳುವ ವಸ್ತುಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆಗೆ ಶೇ.25ರ ದರದಲ್ಲಿ ಮಾರುವ ಮೂಲಕ ಅನ್ಯಾಯ ಎಸಗುತ್ತಿದ್ದಾರೆ. ಹಿರಿಯೂರು ತಾಲೂಕು ಬಸಪ್ಪನ ಮಾಳಿಗೆ ಶ್ರೀಮತಿ ಗೌರಮ್ಮ, ಚಿತ್ರದುರ್ಗ ತಾಲೂಕಿನ ಹೆಗ್ಗೆರೆ ಗ್ರಾಮದ ರೈತ ಮಹಿಳೆ ಯಲ್ಲಮ್ಮ ಸೇರಿದಂತೆ ಸಾವಿರಾರು ರೈತರಿಗೆ ಈ ರೀತಿಯ ಬೆದರಿಕೆ, ಅನ್ಯಾಯ ಮಾಡಲಾಗುತ್ತಿದೆ. ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್‌ಗಳು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಎಲ್ಲ ಅಕ್ರಮಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಈ ಕೂಡಲೇ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳಿಗೆ ಮಾರ್ಗದರ್ಶನ ನೀಡಿ ನಿಯಮಾವಳಿ ರೂಪಿಸಿ ಜಿಲ್ಲಾಧಿಕಾರಿಗಳು ರೈತರ ನೆರವಿಗೆ ಧಾವಿಸಬೇಕು” ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ. ನಿಜಲಿಂಗಪ್ಪ ಮಾತನಾಡಿ, “ಲಕ್ಷಾಂತರ ಕೋಟಿ ಸಾಲ ಮಾಡಿರುವ ಶ್ರೀಮಂತರಿಗೆ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿರುವ, ಅವರ ಸಾಲಮನ್ನಾ ಮಾಡುವ ಬ್ಯಾಂಕ್‌ಗಳು ಶ್ರಮಜೀವಿ ರೈತನನ್ನು ಬಲಿಪಶು ಮಾಡುತ್ತಿವೆ. ರೈತ ಸಂಘದ ಒತ್ತಾಯಗಳನ್ನು ಜಿಲ್ಲಾಡಳಿತ 15 ದಿನಗಳೊಗಾಗಿ ಈಡೇರಿಸಿ ಬ್ಯಾಂಕ್‌ಗಳಿಂದ ಸಾಲಕ್ಕೆ ಜಮಾ ಮಾಡಿಕೊಂಡಿರುವ ಹಣವನ್ನು ರೈತರ ಖಾತೆಗೆ ಹಿಂದಿರುಗಿಸದಿದ್ದರೆ, ಲೀಡ್ ಬ್ಯಾಂಕ್ ಮುಂದೆ ಬೃಹತ್ ಪ್ರತಿಭಟನೆ ಮಾಡಲು ಮುಂದಾಗುತ್ತೇವೆ” ಎಂದು ಎಚ್ಚರಿಸಿದರು.
ಈ ವೇಳೆ ಜಿಲ್ಲಾ ನೀರಾವರಿ ಸಮಿತಿಯ ಅಧ್ಯಕ್ಷರಾದ ಚಿಕ್ಕಗೆರೆ ನಾಗರಾಜ್, ರಾಮರೆಡ್ಡಿ, ಹನುಮಂತರೆಡ್ಡಿ, ಬಾಗೇನಾಳ್ ತಿಪ್ಪೇಸ್ವಾಮಿ ಸೇರಿದಂತೆ ಇತರ ಮುಖಂಡರು, ರೈತರು ಹಾಜರಿದ್ದರು.
