ʼಪ್ರತಿಯೊಬ್ಬ ಮಹಿಳೆಯ ವಿಮೋಚನೆಗೆ ಶಿಕ್ಷಣವು ಕೀಲಿ ಕೈಯಾಗಿದೆʼಯೆಂದು ಹೇಳಿದ ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಶಿಕ್ಷಕಿ ಹಾಗೂ ಅಕ್ಷರದ ಅವ್ವ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ ಪಿ ತಿಪ್ಪೇಸ್ವಾಮಿ ಹೇಳಿದರು.
ಚಿತ್ರದುರ್ಗದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
“ನಾವು ಮಹಿಳೆಯರಿಗೆ ಉತ್ತಮ ಶಿಕ್ಷಣವನ್ನು ನೀಡಿದರೆ ಇತಿಹಾಸದ ಹಾದಿಯನ್ನೇ ಬದಲಿಸಬಹುದೆಂದು ನಂಬಿದ್ದ ಅವರು ಸ್ವಂತ ಮನಸ್ಸು ಹೊಂದಿರುವ ಸ್ತ್ರೀಗೆ ಯೋಗ್ಯವಲ್ಲದ ಗಂಡನೊಂದಿಗೆ ಜೀವನ ಮಾಡಬೇಕಾದ ದುಃಸ್ಥಿತಿ ಇರುವುದು ಶಿಕ್ಷಣದ ಕೊರತೆಯಿಂದ ಎಂದು ಪ್ರತಿಪಾದಿಸುತ್ತಿದ್ದರು” ಎಂದರು.
“ಬಾಲ್ಯವಿವಾಹ, ಸತಿಸಹಗಮನ ಪದ್ಧತಿ, ಕೇಶಮಂಡನೆಯ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿ ದಲಿತರು, ಮಹಿಳೆಯರು, ಆದಿವಾಸಿಗಳು, ಹಿಂದುಳಿದವರು, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಜೀವನವನ್ನೇ ಮುಡಿಪಾಗಿಟ್ಟರು. ಅಲ್ಲದೇ ಮಹಿಳೆಯರ ಶಿಕ್ಷಣಕ್ಕಾಗಿ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿದ ಬ್ರಿಟಿಷ್ ಸರ್ಕಾರವು “ಇಂಡಿಯನ್ ಫಸ್ಟ್ ಲೇಡೀ ಟೀಚರ್ “ಎಂಬ ಬಿರುದು ನೀಡಿ ಗೌರವಿಸಿತು” ಎಂದು ಹೇಳಿದರು.
“ಅಸ್ಪೃಶ್ಯರನ್ನು ನೋಡುವುದೇ ಮಹಾ ಅಪರಾಧವೆಂದು ಭಾವಿಸಿದ್ದ ಕಾಲದಲ್ಲಿ ಅತಿಶೂದ್ರ ಹೆಣ್ಣು ಮಕ್ಕಳ ಶಾಲೆಯನ್ನು ಆರಂಭಿಸಿದ ಭಾರತದ ಶಿಕ್ಷಣ ಪಿತಾಮಹ ಜ್ಯೋತಿ ಬಾ ಫುಲೆಯವರ ಕಾಲಾ ನಂತರ ಅವರ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ ಸಾವಿತ್ರಿ ಬಾಯಿ ಫುಲೆಯವರು ತನ್ನ ಮಗ ಯಶವಂತರಾವ್ ಕಟ್ಟಿಸಿದ ಆಸ್ಪತ್ರೆಯಲ್ಲಿ ಪ್ಲೇಗ್ ರೋಗ ಪೀಡಿತರ ಶುಶ್ರೂಷೆಯಲ್ಲಿ ತನ್ನನ್ನು ಬಲಿಯಾಗಿಸಿಕೊಂಡರು” ಎಂದು ತಿಳಿಸಿದರು.
ಇದೇ ವೇಳೆ “ಬುದ್ಧ ಮತ್ತು ಆತನ ದಮ್ಮ” ಕೃತಿಯನ್ನು ಉಪನ್ಯಾಸಕ ನಾಗೇಂದ್ರಪ್ಪನವರು ವಿಶ್ಲೇಷಿಸಿದರು.
ಈ ಸುದ್ದಿ ಓದಿದ್ದೀರಾ? ಹಿಂದು ರಾಷ್ಟ್ರವಾಗಿಸುವುದನ್ನು ತಡೆಯದಿದ್ದರೆ ಭಾರತ ನಾಶ: ಚಿಂತಕ ರಾಮಚಂದ್ರ ಗುಹಾ
ಸಮಾರಂಭದಲ್ಲಿ ವಕೀಲ ಬೆನಕನಹಳ್ಳಿ ಚಂದ್ರಪ್ಪ, ವಿದ್ಯಾರ್ಥಿ ಮುಖಂಡ ಹೊಳಲ್ಕೆರೆಯ ನವೀನ್ ಕುಮಾರ್, ಬಿಎಸ್‌ಐ ಜಿಲ್ಲಾ ಖಜಾಂಚಿ ಭೀಮನಕೆರೆ ಪಿ ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯದರ್ಶಿ ನೀತಿಗೆರೆ ಮಂಜಪ್ಪ, ಅಂಬೇಡ್ಕರ್ ಕಾಲೇಜ್ ಉಪನ್ಯಾಸಕ ಈ ನಾಗೇಂದ್ರಪ್ಪ, ಗುಡ್ಡದ ರಂಗವನಹಳ್ಳಿ ದುರ್ಗೇಶ್, ಸಾಧಿಕ್ ನಗರದ ಶಕುಂತಲಾ, ಶಿಕ್ಷಕಿ ಲಕ್ಷ್ಮಿದೇವಿ, ಶಾಂತಮ್ಮ ತಿಪ್ಪೇಸ್ವಾಮಿ ಸೇರಿದಂತೆ ಮುಂತಾದವರು ಇದ್ದರು.
ವರದಿ: ಬಿ.ಪಿ.ತಿಪ್ಪೇಸ್ವಾಮಿ, ಭಾರತೀಯ ಬೌದ್ಧ ಮಹಾಸಭಾ ಚಿತ್ರದುರ್ಗ