ರಾಜಕೀಯ ಜಾಗೃತಿಗಾಗಿ ಬೆಂಗಳೂರಿನಲ್ಲಿ ನವೆಂಬರ್ 25ರಂದು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಐಕ್ಯತಾ ಸಮಾವೇಶ ನಡೆಯಲಿದೆ ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಕಾರ್ಯದರ್ಶಿ ಕೆ ರಾಮಚಂದ್ರ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು “ನವೆಂಬರ್ 25ರ ಸೋಮವಾರ ಬೆಳಿಗ್ಗೆ 11:30ಕ್ಕೆ ಬೆಂಗಳೂರಿನ ವಸಂತ ನಗರದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ರಾಜಕೀಯ ಜಾಗೃತಿಯನ್ನು ಮೂಡಿಸಲು ಮತ್ತು ರಾಜಕೀಯದ ಅಧಿಕಾರವನ್ನು ಪಡೆಯುವುದರ ಮೂಲಕ ಸಾಮಾಜಿಕ ಸಮಾನತೆಯನ್ನು ಸಾಧಿಸಲು ಜಾಗೃತಿಗೊಳಿಸುವ ಸಲುವಾಗಿ ಐಕ್ಯತಾ ಸಮಾವೇಶ 2024ನ್ನು ಆಯೋಜಿಸಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಮಂದಿ ಆಗಮಿಸಲಿದ್ದಾರೆ” ಎಂದು ತಿಳಿಸಿದರು.
“1932 ಸೆಪ್ಟೆಂಬರ್ 24ರ ಪೂನಾ ಒಪ್ಪಂದ ಈ ದೇಶದ ಮೂಲನಿವಾಸಿ ಜನಗಳ ರಾಜಕೀಯ ಅಧಿಕಾರವನ್ನು ಕಸಿದುಕೊಂಡಿತ್ತು. ಅಂದಿನಿಂದಲೂ ರಾಜಕೀಯ, ಸಾಮಾಜಿಕ ಸಮಾನತೆಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳನ್ನು ಜಾಗೃತಿ ಪಡಿಸುವುದು ಅನಿವಾರ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಹಿರಿಯೂರು ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಆರ್ ಮಾತನಾಡಿ “75 ವರ್ಷ ಕಳೆದರೂ ಈ ದೇಶದ ಮೂಲ ನಿವಾಸಿಗಳನ್ನು ಬೇರೆ ಬೇರೆ ಆಯಾಮಗಳಲ್ಲಿ ಗುಲಾಮರಂತೆ ನಡೆಸಿಕೊಳ್ಳುತ್ತಿರುವುದು ದುರಂತ. ಡಾ. ಅಂಬೇಡ್ಕರ್ ಅವರು ಹೇಳಿದಂತೆ ದಾಸ್ಯದ ಬದುಕಿನಲ್ಲಿ ಜೀವಿಸುವುದಕ್ಕಿಂತ ಸಾಯುವುದೇ ಮೇಲು ಎಂಬಂತೆ ನಾವು ಸ್ವಾಭಿಮಾನ, ಸಮಾನತೆ ಮತ್ತು ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಡಬೇಕಾಗಿದೆ. ಸಂವಿಧಾನದ ಅನುಚ್ಛೇದ 38, 39ಎ ಅಡಿಯಲ್ಲಿ ಜಾತಿ, ಧರ್ಮ, ವರ್ಗ, ಭಾಷೆ ಎಲ್ಲ ಕಾರಣದಿಂದ ಅವಕಾಶಗಳ ಸಮಾನತೆ ಪ್ರತಿಪಾದಿಸಿದರೂ ಕೂಡ, ರಾಜಕೀಯ ಪಕ್ಷಗಳು ಸಮಾನತೆ ಕಲ್ಪಿಸದೆ ಬೊಗಳೆ ಬಿಡುತ್ತಿವೆ. ಹಾಗಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜಾಗೃತಿ ಮಾಡಬೇಕಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು l ಕೆಎಸ್ಆರ್‌ಟಿಸಿ ಬಸ್ ನಿರ್ವಾಹಕ ಅಪಘಾತದಲ್ಲಿ ಸಾವು; ಮೇಲಧಿಕಾರಿಗಳ ನಿರ್ಲಕ್ಷ್ಯದ ಆರೋಪ
“ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯ ಜನರು ಆಗಮಿಸಲಿದ್ದು, ಚಿತ್ರದುರ್ಗದಿಂದ ಬಹಳಷ್ಟು ಸಂಖ್ಯೆಯ ಜನರು ಆಗಮಿಸಲಿದ್ದಾರೆ” ಎಂದು ತಿಳಿಸಿದರು.
ಈ ವೇಳೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾ ಕಾರ್ಯಧ್ಯಕ್ಷ ತಿಪ್ಪೇಸ್ವಾಮಿ, ವಿನೋದ್ ಕುಮಾರ್, ಎಸ್ ಟಿ ಘಟಕದ ಅಧ್ಯಕ್ಷರಂಗಸ್ವಾಮಿ, ಲಕ್ಷ್ಮಣ್ ರಾವ್ ಸೇರಿದಂತೆ ಇತರರು ಇದ್ದರು.