ಚರಂಡಿಗಳಲ್ಲಿ ಹೂಳು ತುಂಬಿಸಿದ್ದು, ಕೊಳಚೆ ನೀರು ಮನೆಗಳ ಸುತ್ತ ಹಾಗೂ ರಸ್ತೆಯ ಮೇಲೆ ಹರಿಯುತ್ತಿದೆ. ಮಿನಿ ಟ್ಯಾಂಕ್‌ನಿಂದ ನೀರು ಸೋರಿಕೆಯಾಗುತ್ತಿದೆ. ಆ ಟ್ಯಾಂಕ್ ಮೇಲೆ ಪಾಚಿ ಬೆಳೆದುಕೊಂಡಿದೆ. ಕೊಳಚೆ ಮತ್ತು ನೀರಿನಿಂದಾಗಿ ಪೊದೆ ಬೆಳೆದುಕೊಂಡು ಹಾವು, ಕ್ರಿಮಿಕೀಟಗಳ ಆವಾಸ ಸ್ಥಾನವಾಗಿದೆ. ಅಂಗನವಾಡಿ ಕಟ್ಟಡವೂ ಪೊದೆಗಳಿಂದ ಸುತ್ತುವರೆದಿದೆ – ಇದು ಗುಡ್ಡದ ರಂಗವನಹಳ್ಳಿಯಲ್ಲಿ ಕಂಡುಬರುವ ಸಾಮಾನ್ಯ ದೃಶ್ಯಗಳು.
ಚಿತ್ರದುರ್ಗದಿಂದ 5 ಕಿ.ಮೀ ದೂರದಲ್ಲಿರುವ ಗುಡ್ಡದ ರಂಗವನಹಳ್ಳಿ ಗ್ರಾಮದ ದಲಿತ ಕಾಲೋನಿಯಲ್ಲಿ ಸುಮಾರು 150 ರಿಂದ 200 ಕುಟುಂಬಗಳು ವಾಸಮಾಡುತ್ತಿವೆ. ಈ ದಲಿತ ಕಾಲೋನಿಯಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಗ್ರಾಮದ ದಲಿತ ಕಾಲೋನಿಯಲ್ಲಿ ಕೆಲವು ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಿದ್ದರೂ, ಯಾವುದಾದರೂ ಒಂದು ಬದಿಯಲ್ಲಿ ಚರಂಡಿ ನಿರ್ಮಿಸಬೇಕಾಗಿತ್ತು. ಆದರೆ, ಇಲ್ಲಿ ಚರಂಡಿ ನಿರ್ಮಿಸದೆ ನೆಪ ಮಾತ್ರಕ್ಕೆ ಕೇವಲ ರಸ್ತೆಯನ್ನು ನಿರ್ಮಿಸಿದ್ದು ಮನೆಗಳಿಂದ ಹೊರಬರುವ ಚರಂಡಿ ನೀರು ರಸ್ತೆಯ ಮಧ್ಯದಲ್ಲಿ ರಸ್ತೆಯ ಮೇಲೆಲ್ಲಾ ಹರಿದಾಡುವಂತಿದೆ.
ಕೆಲವು ರಸ್ತೆಗಳ ಪಕ್ಕದಲ್ಲಿ ಚರಂಡಿ ನಿರ್ಮಿಸಿದ್ದು, ಆ ಚರಂಡಿಗಳಲ್ಲಿ ಹೂಳು ತೆಗೆಯದೆ ವರ್ಷಗಳೇ ಕಳೆದಿವೆ. ಹಾಗಾಗಿ ಚರಂಡಿಗಳು ತುಂಬಿ ಕಟ್ಟಿಕೊಂಡಿದ್ದು, ಚರಂಡಿಯ ನೀರು ರಸ್ತೆಯ ಮೇಲೆಲ್ಲಾ ಹರಿದು ಮಳೆ ಬಂದರೆ ರಸ್ತೆ ಮೇಲೆಲ್ಲಾ ಹರಿದು ಮನೆಯೊಳಕ್ಕೆ ನುಗ್ಗುವ ಪರಿಸ್ಥಿತಿ ಇದೆ. ಇದೇ ರಸ್ತೆಯ ಮೇಲೆ ಮಕ್ಕಳು ವೃದ್ಧರಾದಿಯಾಗಿ ಎಲ್ಲರೂ ತುಳಿದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

ಕೆಲ ಮನೆಗಳ ಮುಂದೆ ಚರಂಡಿಗಳನ್ನು ನಿರ್ಮಿಸದೆ ಬಿಟ್ಟಿದ್ದು, ಮನೆಗಳ ಮುಂದೆ ಚರಂಡಿಯ ಹೂಳೆತ್ತದೆ, ಕೊಳಚೆ ನೀರು ಗುಂಡಿಯಲ್ಲಿ ತುಂಬಿಕೊಂಡು ಕಾಲರಾ, ಮಲೇರಿಯಾ ಇನ್ನಿತರ ರೋಗಗಳನ್ನು ಆಹ್ವಾನಿಸುವಂತಿದೆ. ಚರಂಡಿಯ ನೀರು ಸರಾಗವಾಗಿ ಹೊರಗೆ ಹೋಗಲು ಮಾರ್ಗಗಳನ್ನು ನಿರ್ಮಿಸದೆ ಮನೆಗಳ ಪಕ್ಕದಲ್ಲಿ ಹೋಗಿದ್ದು ಹೆಚ್ಚು ಮಳೆ ಬಂದರೆ ಮನೆ ಅಂಗಳದಲ್ಲೆಲ್ಲ ಚರಂಡಿಯ ನೀರು ತುಂಬಿಕೊಳ್ಳುವ ಪರಿಸ್ಥಿತಿ ಕಾಲೋನಿಯಲ್ಲಿದೆ. ಹಾಗೆ ಇಲ್ಲಿ ಕೆಲವು ಕಡೆ ಕಾಂಕ್ರಿಟ್ ರಸ್ತೆ ಕೂಡ ನಿರ್ಮಾಣವಾಗಿಲ್ಲ.
ಕಾಲೋನಿಯಲ್ಲಿರುವ ಮಿನಿ ಟ್ಯಾಂಕನ್ನು ನೋಡಿದರೆ ನೀರು ತುಂಬಿಕೊಂಡು ಸೋರುತ್ತಿರುವ ಪೈಪ್‌ಗಳಿಗೆ ಗೋಣಿಚೀಲ ಸುತ್ತಿ ಬಿಟ್ಟಿರುವುದು ಕಂಡುಬಂದಿದ್ದು, ರಸ್ತೆಯಲ್ಲಿ ಮತ್ತು ಟ್ಯಾಂಕ್ ಮೇಲೆಲ್ಲಾ ನೀರು ಹರಿದು ಟ್ಯಾಂಕ್ ಹೊರ ಭಾಗದಲ್ಲಿ ಮತ್ತು ಟ್ಯಾಂಕಿಯ ಸುತ್ತಮುತ್ತ ಪಾಚಿ ಕಟ್ಟಿದೆ. ಟ್ಯಾಂಕ್ ಹೊರಭಾಗವೇ ಈ ರೀತಿ ಇದ್ದರೆ ಒಳಭಾಗದ ಪರಿಸ್ಥಿತಿ ಅವಲೋಕಿಸಬೇಕಾಗಿದೆ. ಈ ಟ್ಯಾಂಕನ್ನು ಸ್ವಚ್ಛಗೊಳಿಸದೆ ಎಷ್ಟು ಸಮಯವಾಗಿದೆಯೆಂದು ಸ್ಥಳೀಯ ಆಡಳಿತವೇ ಹೇಳಬೇಕು.

ಟ್ಯಾಂಕ್‌ನ ಮುಂಭಾಗದಲ್ಲಿ ವಾಸವಿದ್ದ ವೃದ್ದೆಯೊಬ್ಬರನ್ನು ಈ ದಿನ.ಕಾಮ್ ಮಾತನಾಡಿಸಿದಾಗ, “ಅವರು ಈ ಟ್ಯಾಂಕ್ ತೊಳೆಯದೇ ಮೂರ್ನಾಲ್ಕು ವರ್ಷಗಳೇ ಕಳೆದಿವೆ. ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಕೇಳಿಕೊಂಡರೂ ಸ್ವಚ್ಛಗೊಳಿಸಿಲ್ಲ. ಅದೇ ನೀರನ್ನೇ ಕುಡಿಯಲು ಮತ್ತು ಬಳಸಲು ಇಲ್ಲಿ ನಾವೆಲ್ಲ ಉಪಯೋಗಿಸುತ್ತಿದ್ದೇವೆ. ನಮಗೆ ರೋಗ ಬಂದರೆ ಯಾರು ಜವಾಬ್ದಾರರು” ಎಂದು ಪ್ರಶ್ನಿಸಿದರು.
“ಇತ್ತೀಚೆಗೆ ನಿರ್ಮಾಣವಾದ ಅಂಗನವಾಡಿ ಕೇಂದ್ರದ ಬಳಿ ಈ ದಿನ.ಕಾಮ್ ಭೇಟಿ ನೀಡಿದಾಗ, ಕೇಂದ್ರದ ಸುತ್ತಮುತ್ತ ಗಿಡಗಂಟಿಗಳು ಬೆಳೆದಿರುವುದು ಕಂಡುಬಂದಿದೆ. ಅದರ ಪಕ್ಕದಲ್ಲಿಯೇ ಸ್ಥಳೀಯರು ಕಸ ಸುರಿದಿದ್ದು, ಅದನ್ನು ಸ್ವಚ್ಛಗೊಳಿಸದೆ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯತೆ ಮೆರೆದಿದೆ. ಭೇಟಿ ನೀಡಿದಾಗ ಪಕ್ಕದಲ್ಲಿದ್ದ ಗುಡಿಸಲೊಂದರಲ್ಲಿ ಕಲ್ಲುಪೊಟರೆಯಲ್ಲಿ ಒಂದು ಹಾವು ಸೇರಿಕೊಂಡಿದ್ದು, ಅಲ್ಲಿ ಹುಡುಗರು ಕೋಲು ಹಿಡಿದು ಓಡಿಸಲು ಅಥವಾ ಸಾಯಿಸಲು ಪ್ರಯತ್ನ ಪಡುತ್ತಿದ್ದುದು ಕಂಡುಬಂದಿತು. ಇಂತಹ ಸ್ಥಿತಿಯಲ್ಲಿ ಮಕ್ಕಳನ್ನು ಪಾಲಕರು ಯಾವ ಧೈರ್ಯದಿಂದ ಅಂಗನವಾಡಿಗೆ ಕಳುಹಿಸುತ್ತಾರೆ” ಎಂಬುದು ಪ್ರಶ್ನೆಯಾಗಿದೆ.

ಸ್ಥಳೀಯ ಯುವಕ ರಮೇಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಚರಂಡಿಗಳು ಹೂಳು ತುಂಬಿಕೊಂಡಿದ್ದು, ಮೂರ್ನಾಲ್ಕು ವರ್ಷ ಕಳೆದರೂ ಚರಂಡಿಯನ್ನು ಸ್ವಚ್ಛಗೊಳಿಸಿಲ್ಲ. ಬಹಳಷ್ಟು ಚರಂಡಿಗಳು ಹೂಳು ತುಂಬಿಕೊಂಡು ರಸ್ತೆ ಮೇಲೆಲ್ಲಾ ಚರಂಡಿಯ ನೀರು ಹರಿಯುತ್ತದೆ. ಕೊಳಚೆ ನೀರು ಮನೆಗಳ ಮುಂದೆ ನಿಂತು ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಅಂಗನವಾಡಿ ಕೇಂದ್ರದ ಸುತ್ತಮುತ್ತ ಗಿಡಗಂಟಿಗಳಲ್ಲಿ ಕ್ರಿಮಿಕೀಟ ಮತ್ತು ಹಾವು ಚೇಳುಗಳಂತ ವಿಷ ಜಂತು, ಹುಳಗಳು ಸಾಮಾನ್ಯವಾಗಿ ಕಂಡುಬರುತ್ತಿವೆ. ಪೋಷಕರು ಮಕ್ಕಳನ್ನು ಆತಂಕದಿಂದ ಕಳುಹಿಸುವುದಕ್ಕೆ ಯೋಚನೆ ಮಾಡುತ್ತಿದ್ದಾರೆ. ಜೊತೆಗೆ ಪಕ್ಕದಲ್ಲಿಯೇ ಸ್ಥಳೀಯರು ಕಸ ಕಡ್ಡಿ, ತ್ಯಾಜ್ಯ ವಸ್ತುಗಳನ್ನು ಸುರಿದಿದ್ದಾರೆ. ತ್ಯಾಜ್ಯವನ್ನು ಸ್ವಚ್ಛಗೊಳಿಸಿ ಮಕ್ಕಳಿಗೆ ಆಟದ ಮೈದಾನವನ್ನು ರೂಪಿಸುವಂತೆ ಮನವಿ ಮಾಡಿದರೂ ಸ್ಥಳೀಯ ಆಡಳಿತ ಗಣನೆಗೆ ತೆಗೆದುಕೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ಚಿತ್ರದುರ್ಗ | ದಲಿತರ ಬೀದಿಯಲ್ಲಿ ಮೂಲ ಸೌಕರ್ಯ ಮರೀಚಿಕೆ; ಜನಪ್ರತಿನಿಧಿಗಳ ನಿರ್ಲಕ್ಷ್ಯ
“ಅಂಬೇಡ್ಕರ್ ಭವನವನ್ನು ಇತ್ತೀಚೆಗೆ ನಿರ್ಮಿಸಿದ್ದಾರೆ. ಇದರ ಸುತ್ತಮುತ್ತಲೂ ಗಿಡಗಂಟಿಗಳು ಬೆಳೆದಿದ್ದು, ಉಪಯೋಗಿಸದ ಸ್ಥಿತಿಯಲ್ಲಿದೆ. ಸರ್ಕಾರದ ಕೆಲವು ಮೂಲ ಸೌಕರ್ಯಗಳಿದ್ದರೂ ಕೂಡ ಅದನ್ನು ಉಪಯೋಗಿಸಿದ ಸ್ಥಿತಿ ಕಾಲೋನಿಯಲ್ಲಿದೆ. ಈಗಲಾದರೂ ಸ್ಥಳೀಯ ಆಡಳಿತ ಮತ್ತು ಜಿಲ್ಲಾಡಳಿತ ಎಚ್ಚೆತ್ತು ಸ್ವಚ್ಛತೆಯನ್ನು ಕಾಪಾಡಿ ಜನರ ಆರೋಗ್ಯವನ್ನು ಕಾಪಾಡಬೇಕು” ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು.