ಚಾಲಕನ ಹಿಂಬದಿಯಲ್ಲಿದ್ದ ಪಾರಿವಾಳ ಹಾರಿದ ಕಡೆ ಗಮನ ಹರಿಸಿದ್ದು, ಚಾಲಕನ ಅಜಾಗರೂಕತೆಯಿಂದ ಖಾಸಗಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಉರುಳಿ ಅಪಘಾತ ಸಂಭವಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಹೊರವಲಯದಲ್ಲಿ ನಡೆದಿದೆ.
ಚಳ್ಳಕೆರೆಗೆ ಪ್ರತಿನಿತ್ಯ ಸಂಚರಿಸುವ ಬಸ್ಸೊಂದು ನಗರದ ಹೊರವಲಯದಲ್ಲಿ ಪಲ್ಟಿ ಹೊಡೆದ ಪರಿಣಾಮವಾಗಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಪ್ರತ್ಯಕ್ಷ ದರ್ಶಿಯೊಬ್ಬರು ಮಾಹಿತಿ ನೀಡಿದ ಪ್ರಕಾರ, “ಬಸ್ ಚಾಲಕನ ಹಿಂಬದಿಯಲ್ಲಿಟ್ಟಿದ್ದ ಕಾಗದದ ಪೆಟ್ಟಿಗೆಯೊಳಗಿನಿಂದ ಪಾರಿವಾಳ ಹೊರಗೆ ಹಾರಿತು. ಹಾಗಾಗಿ ಅದರ ಕಡೆ ಗಮನ ಹರಿದು ಅದನ್ನು ಹಿಡಿಯಲು ಕೈ ಚಾಚಿದ ಚಾಲಕನಿಗೆ ಬಸ್ ನಿಯಂತ್ರಣ ತಪ್ಪಿದ್ದು, ಬೆಂಗಳೂರು-ಬಳ್ಳಾರಿ ಮಾರ್ಗದ ರಾಷ್ಟ್ರೀಯ ರಸ್ತೆಯ ಡಿವೈಡರ್ ಹತ್ತಿ ರಸ್ತೆ ಮಧ್ಯೆ ಪಲ್ಟಿಯಾಗಿ ಬಿದ್ದಿದೆ. ಬಸ್‌ನಲ್ಲಿದ್ದ 15ಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಗಂಭೀರ ಪರಿಣಾಮಗಳು ಉಂಟಾಗಿಲ್ಲ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ನರನಾಳ ಗ್ರಾಮದ ರೈತ ಆತ್ಮಹತ್ಯೆ
ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಪ್ರಯಾಣಿಕರನ್ನು ಹೊರಗೆ ಕರೆತರುವಲ್ಲಿ ಸಹಕರಿಸಿದರು. ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಗಾಯಾಳುಗಳನ್ನು ರಕ್ಷಿಸಲು ಕ್ರಮ ಕೈಗೊಂಡು ಚಳ್ಳಕೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಳ್ಳಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.