ದೂರು ಮತ್ತು ಅಹವಾಲುಗಳನ್ನು ಸ್ವೀಕರಿಸದ ಆಡಳಿತ, ಪೊಲೀಸ್ ವ್ಯವಸ್ಥೆಯ ವಿರುದ್ಧ ರೊಚ್ಚಿಗೆದ್ದ ಯುವಕನೊಬ್ಬ ಸರ್ಕಾರಿ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಮಿನಿ ವಿಧಾನಸೌಧದ ಮುಂದೆ ನಡೆದಿದೆ.
ತನ್ನ ತಾಯಿ ನೀಡಿದ ದೂರು ಸ್ವೀಕರಿಸಲಿಲ್ಲವೆಂಬ ಕಾರಣಕ್ಕೆ ಆಡಳಿತ ವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆ ಮೇಲೆ ಅಸಮಾಧಾನ ವ್ಯಕ್ತಪಡಿಸಿ ಚಳ್ಳಕೆರೆಯ ಮಿನಿ ವಿಧಾನಸೌಧದ ಸರ್ಕಾರಿ ವಾಹನಕ್ಕೆ ಬೆಂಕಿ ಹಚ್ಚಿದ್ದಾನೆ. ಯುವಕನನ್ನು ಚಳ್ಳಕೆರೆಯ ಪೃಥ್ವಿರಾಜ್ ಎಂದು ಗುರುತಿಸಲಾಗಿದೆ.
ಇದೇ ಯುವಕ ಪೃಥ್ವಿರಾಜ್, ಕಳೆದ ತಿಂಗಳು ಬೆಂಗಳೂರಿನ ವಿಧಾನಸೌಧದ ಮುಂಭಾಗ ತನ್ನ ಸ್ಕೂಟರ್‌ಗೆ ಬೆಂಕಿ ಹಾಕಿ, ಅಸಮಾಧಾನ ವ್ಯಕ್ತಪಡಿಸಿದ್ದನು. ತಾನು ಪ್ರವಾಸಕ್ಕೆಂದು ತೆರಳಿದ ವೇಳೆ ಆತಂಕಗೊಂಡ ಅವನ ತಾಯಿ ಕಾಣೆಯಾದ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಆಗಮಿಸಿದಾಗ ಚಳ್ಳಕೆರೆ ನಗರದ ಪೊಲೀಸ್ ಠಾಣೆ ಮತ್ತು ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯ ಪೊಲೀಸರು ದೂರು ಸ್ವೀಕರಿಸದೆ ನಿರ್ಲಕ್ಷ್ಯ ತೋರಿದ್ದಾರು. ಮನೆಗೆ ಹಿಂದಿರುಗಿದ ನಂತರ ಈ ವಿಷಯ ತಿಳಿದು ಕರ್ತವ್ಯಲೋಪ ತೋರಿದ್ದಾರೆ ಎಂದು ಪೊಲೀಸರನ್ನು ಪ್ರಶ್ನಿಸಲು ಹೋಗಿದ್ದಾಗ, ಮೊಬೈಲ್ ಕಿತ್ತುಕೊಂಡು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದನು.

ಈ ಬಗ್ಗೆ ದೂರು ನೀಡಿದ್ದರೂ ಹಿರಿಯ ಅಧಿಕಾರಿಗಳೂ ಕೂಡ ಗಮನಹರಿಸಿಲ್ಲವೆಂದು ಆಕ್ರೋಶಗೊಂಡ ಯುವಕ ಆಗಾಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸಿಟ್ಟನ್ನು ವ್ಯಕ್ತಪಡಿಸಿದ್ದ ಎಂದು ತಿಳಿದುಬಂದಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಮೊದಲು ವಾಹನಕ್ಕೆ ಬೆಂಕಿ ಹಚ್ಚಲು ಇಂದು ಬೆಳಗ್ಗೆ 11ಕ್ಕೆ ಚಳ್ಳಕೆರೆಯ ಪೊಲೀಸ್ ಠಾಣೆಗೆ ತೆರಳಿದ್ದ ವೇಳೆ ಅಲ್ಲಿ ಯಾವುದೇ ವಾಹನ ಇಲ್ಲದಿದ್ದನ್ನು ಕಂಡು ಹತ್ತಿರದಲ್ಲೇ ಇರುವ ಮಿನಿ ವಿಧಾನಸೌಧಕ್ಕೆ ಬಂದಿದ್ದಾನೆ. ಮುಂಭಾಗದಲ್ಲಿ ನಿಲ್ಲಿಸಿದ್ದ ಸರ್ಕಾರಿ ವಾಹನದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಸಾಲದ ಸುಳಿಗೆ ಸಿಲುಕಿ ನೇಕಾರ ಕೂಲಿ ಕಾರ್ಮಿಕ ಆತ್ಮಹತ್ಯೆ
ಬೆಂಕಿ ಹೆಚ್ಚುತ್ತಿದ್ದಂತೆ ಎಚ್ಚರಗೊಂಡ ಸಿಬ್ಬಂದಿ ಮತ್ತು ಸಾರ್ವಜನಿಕರು ಬೆಂಕಿ ನಂದಿಸಿದ್ದಾರೆ. ಯಾವುದೇ ಅನಾಹುತ ಸಂಭವಿಸಿಲ್ಲವೆಂದು ತಿಳಿದುಬಂದಿದೆ. ವಾಹನಕ್ಕೂ ಕೂಡ ಹೆಚ್ಚಿನ ಹಾನಿ ಉಂಟಾಗಿಲ್ಲವೆಂದು ತಿಳಿದುಬಂದಿದೆ. ತಹಶೀಲ್ದಾರ್ ರೆಹಮಾನ್ ಪಾಷ ನೀಡಿದ ದೂರಿನಂತೆ ಪೊಲೀಸರು ಯುವಕನನ್ನು ಬಂಧಿಸಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.