ಅಟಲ್ ಭೂಜಲ ಯೋಜನೆಯಡಿ ಕೃಷಿ ಇಲಾಖೆಯ ಬಬ್ಬೂರು ಫಾರಂನ ಚಿತ್ರದುರ್ಗ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರಿಗಾಗಿ ವಿವಿಧ ಕೃಷಿ ಕ್ರಮಗಳ ಕುರಿತು ಜ. 29ರಿಂದ 31ರವರೆಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್ ರಜನೀಕಾಂತ ಮಾಹಿತಿ ನೀಡಿದರು.
ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ದಪಡಿಸುವುದು, ನೀರಿನ ಮಿತ ಬಳಕೆ, ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳು ಮತ್ತು ನೀರಿನ ಮರು ಪೂರೈಕೆ ಕ್ರಮಗಳ ಕುರಿತು ಹಿರಿಯೂರು ತಾಲೂಕಿನ ರೈತರಿಗೆ ಜ.29ರಂದು, ಚಳ್ಳಕೆರೆ ತಾಲೂಕಿನ ರೈತರಿಗೆ ಜ.30ರಂದು ಹಾಗೂ ಜ.31ರಂದು ಚಿತ್ರದುರ್ಗ ತಾಲೂಕಿನ ರೈತರಿಗೆ ತಲಾ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಪ್ರತಿ ದಿನ ಬೆಳಿಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ.
ಅಟಲ್ ಭೂಜಲ ಯೋಜನೆಯ ರಾಜ್ಯ ಮತ್ತು ಜಿಲ್ಲಾ ಕಾರ್ಯಕ್ರಮ ನಿರ್ವಹಣೆ ಘಟಕದ ಅಧಿಕಾರಿಗಳು ತರಬೇತಿಯಲ್ಲಿ ಯೋಜನೆಯ ಉದ್ದೇಶ, ಸಮುದಾಯ ಸಹಭಾಗಿತ್ವದೊಂದಿಗೆ ಹಲವು ವಿಷಯ ಪ್ರಸ್ತುತ ಪಡಿಸಲಿದ್ದಾರೆ. ನೆಟಾಫಿಮ ಸಂಸ್ಥೆಯ ಬೇಸಾಯ ಶಾಸ್ತ್ರಜ್ಞ ಅಂಜಿನಪ್ಪ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆ, ಹನಿ ನೀರಾವರಿ ಮತ್ತು ಸ್ಪ್ರಿಂಕ್ಲರ್ ಘಟಕಗಳ ಉಪಯೋಗ ಮತ್ತು ಅವುಗಳ ನಿರ್ವಹಣೆಯ ಹಾಗೂ ರಸವಾರಿ ತಂತ್ರಜ್ಞಾನದ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.
ಸ್ವಯಂ ನಿಯಂತ್ರಿತ ಉಪಕರಣ ಬಳಸಿ ಕೃಷಿಯಲ್ಲಿ ನೀರಿನ ಸಮರ್ಥ ಬಳಕೆ ಕುರಿತು ತರಬೇತಿಯಲ್ಲಿ ವಿಷಯ ಮಂಡನೆಯಾಗಲಿದೆ. ಬಬ್ಬೂರಿನ ಜವಳಿ ಫಾರಂನ ಪ್ರಗತಿಪರ ರೈತ ಡಾ. ಏಕಾಂತಯ್ಯರವರ ಸಮಗ್ರ ಕೃಷಿ ಪದ್ದತಿಯ ತಾಕಿಗೆ ಮಧ್ಯಾಹ್ನ ಭೇಟಿ ನೀಡಿ ಕುಷ್ಕಿ ಪ್ರದೇಶದಲ್ಲಿ ನೀರಿನ ಸಮರ್ಥ ಬಳಕೆ ಮಾಡುವಲ್ಲಿ ಯಶಸ್ವಿಯಾದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುವುದು.
ಈ ಸುದ್ದಿ ಓದಿದ್ದೀರಾ?: ಚಿತ್ರದುರ್ಗ | ಮುಗ್ಧರನ್ನು ಪ್ರಬುದ್ಧರನ್ನಾಗಿಸಲು ಶಿಕ್ಷಣ ಕ್ರಾಂತಿ ಮಾಡಿದವರು ಮಂಜರಿ ಹನುಮಂತಪ್ಪ: ಭೋವಿ ಗುರುಪೀಠ ಶ್ರೀ
ಹಿರಿಯೂರು, ಚಳ್ಳಕೆರೆ ಮತ್ತು ಚಿತ್ರದುರ್ಗಗಳ ಪ್ರತಿ ತಾಲ್ಲೂಕಿನಿಂದ ಆಸಕ್ತ 60 ಮಂದಿ ರೈತ ಬಾಂಧವರು ತರಬೇತಿಯಲ್ಲಿ ಭಾಗವಹಿಸಲು ಮೊಬೈಲ್ ಸಂಖ್ಯೆ 8277931058 ಗೆ ಕರೆ ಮಾಡಿ ಹೆಸರು ನೊಂದಾಯಿಸಿಕೊಂಡು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್ ರಜನೀಕಾಂತ ಕೋರಿದ್ದಾರೆ.
