ಆಕ್ರಮ ಖಾತೆ ಇ-ಸ್ವತ್ತು ರದ್ದು ಭರವಸೆ ನೀಡಿ, ನಿರ್ಲಕ್ಷ್ಯ ವಹಿಸಿ, ಮೋಸ, ವಂಚನೆ ಮಾಡಿದ್ದಾರೆ. ಅನ್ಯಾಯ ಮಾಡಿದ ಅಧಿಕಾರಿಗಳು ಮತ್ತು ಅಕ್ರಮ ಖಾತೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಚಿತ್ರದುರ್ಗ ಜಿಲ್ಲಾ ಕಚೇರಿ ಎದುರು ಸಂತ್ರಸ್ತ ಮಹಿಳೆಯೊಬ್ಬರು ಅನಿರ್ದಿಷ್ಟಾವಧಿ ಧರಣಿ ನೆಡೆಸುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಕಿತಿಮ್ಮಯ್ಯನಹಟ್ಟಿ ಗ್ರಾಮದ ಚಿಕ್ಕಣ್ಣ ಬಿನ್ ಯರ್ರಪ್ಪ ಅವರ ಖಾತೆ ನಂ:839ಕ್ಕೆ ಸಂಬಂಧಿಸಿದಂತೆ ಚಿಕ್ಕಣ್ಣ ಬಿನ್ ಯರ್ರಪ್ಪರವರ ಹೆಸರಿನಲ್ಲಿ ಸ್ವಾಧೀನಾನುಭವದಲ್ಲಿರುವ ಮನೆ ದುತ್ತು ಖಾಲಿ ಜಾಗವನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಅಕ್ರಮ ಖಾತೆದಾರರು ಹುಟ್ಟುವ ಮೊದಲೇ ಮೈನರ್ ಹೆಸರಿಗೆ ಖಾತೆ ಮಾಡಿಕೊಟ್ಟಿರುವ ದೇವಪುರ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಲು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ದೂರು ನೀಡಿದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ಹಿಂದೆ ಖಾತೆ ರದ್ದುಪಡಿಸಲು ಒತಾಯಿಸಿ ಧರಣಿ ನಡೆಸಿದಾಗ ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿಯವರು 15 ದಿನದೊಳಗೆ ಖಾತೆಯನ್ನು ರದ್ದುಗೊಳಿಸಿ, ಸರಿಪಡಿಸಿ ಮೂಲ ಖಾತೆದಾರರ ಅಥವಾ ವಾರಸುದಾರರ ಹೆಸರಿಗೆ ಖಾತೆ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದರು. ಇದೀಗ ಮೂರು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ” ಎಂದು ಆರೋಪಿಸಿ ಚಿಕ್ಕಣ್ಣ ಅವರ ಪುತ್ರಿ ತನು ಚಿಕ್ಕಣ್ಣ ಯಾದವ್ ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದ್ದಾರೆ.
ತನು ಚಿಕ್ಕಣ್ಣ ಯಾದವ್ ಅವರು ಜೂನ್ 7ರಿಂದ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೂತಿದ್ದು, ಮಳೆ-ಗಾಳಿಯೆನ್ನದೇ ಅನಿರ್ದಿಷ್ಟಾವಧಿ ಧರಣಿ ನೆಡೆಸುತ್ತಿದ್ದಾರೆ. ಆದರೂ ಭರವಸೆ ನೀಡಿದ ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿರುವುದು ಅತ್ಯಂತ ಶೋಚನೀಯವಾಗಿದೆ.
ಹೋರಾಟ ನೆಡೆಸುತ್ತಿರುವ ತನು ಚಿಕ್ಕಣ್ಣ ಯಾದವ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮೂಲ ಖಾತೆದಾರ ಅಥವಾ ವಾರಸುದಾರರ ಹೆಸರಿನಲ್ಲಿದ್ದ ನಮ್ಮ ಸ್ವಾಧೀನ ಅನುಭವದಲ್ಲಿರುವ ಮನೆ ಮತ್ತು ಖಾಲಿ ಜಾಗವನ್ನು ನಾಗರಾಜಪ್ಪ ಬಿನ್ ತಿಮ್ಮಣ್ಣ, ಹಾಲಪ್ಪ ಬಿನ್ ಕೇಶವಪ್ಪ, ವಿರುಪಾಕ್ಷಪ್ಪ ಬಿನ್ ಕೇಶವಪ್ಪ ಈ ಮೂರು ಜನರಿಗೆ ಅಕ್ರಮವಾಗಿ ಖಾತೆ ಮಾಡಿ ಕೊಟ್ಟಿದ್ದು, ನಮ್ಮ ಕಾನೂನು ಹೋರಾಟದ ಫಲವಾಗಿ ರದ್ದು ಮಾಡಲಿಕ್ಕೆ ಆದೇಶವಾಗಿದೆ. ನ್ಯಾಯಾಲಯದ ಆದೇಶವಿದ್ದರೂ ಹಕ್ಕು ಪತ್ರವಿದ್ದರೂ ಸಹ ಇ-ಸ್ವತ್ತು ಮಾಡಿಕೊಡದೆ ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ. ಈವರೆಗೂ ಅಕ್ರಮ ಖಾತೆ ರದ್ದು ಮಾಡದೇ ನಿರ್ಲಕ್ಷ ವಹಿಸಿರುವ ಪಿಡಿಒ ಮತ್ತು ಇಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು 2019ರಿಂದಲೂ ಸಿಇಒ ಅವರಿಗೆ ದೂರು ನೀಡುತ್ತಲೇ ಇದ್ದೇನೆ. ಆದರೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಅಕ್ರಮ ಖಾತೆಯನ್ನು ಮೂಲ ವಾರಸುದಾರರ ಹೆಸರಿಗೆ ಬದಲಾಯಿಸಿ ಕೊಟ್ಟಿಲ್ಲ. ಹಿಂದೆ ಧರಣಿ ನಡೆಸಿದಾಗ ಸ್ಥಳಕ್ಕೆ ಬಂದಿದ್ದ ಅಪರ ಜಿಲ್ಲಾಧಿಕಾರಿ 15 ದಿನಗಳಲ್ಲಿ ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ್ದರು, ಈಗ ಸುಮಾರು ಮೂರು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಅಕ್ರಮ ಖಾತೆಯನ್ನು ರದ್ದುಪಡಿಸಿ ವಾರಸುದಾರರಿಗೆ ಖಾತೆಯನ್ನು ಬದಲಾಯಿಸಿ ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತಾಯಿಸಿದರು.
“ಅನ್ಯಾಯ ಎಸಗಿರುವ ಅಕ್ರಮ ಖಾತೆದಾರರ ಮತ್ತು ಅಧಿಕಾರಿಗಳ ವಿರುದ್ಧ ಏಕಾಂಗಿಯಾಗಿ ಮಹಿಳೆಯೊಬ್ಬರು ಹೋರಾಟ ನಡೆಸುತ್ತಿರುವುದು ನಮ್ಮ ಸಮಾಜದ ಅಧೋಗತಿಗೆ ಮತ್ತು ಆಡಳಿತ ಶಾಹಿಯ ನಿರ್ಲಕ್ಷಕ್ಕೆ, ಸಮಾಜದ ಮೋಸ ವಂಚನೆಗೆ ಹಿಡಿದ ಕೈಗನ್ನಡಿಯಾಗಿದೆ. ಈಗಲಾದರೂ ಸ್ಥಳೀಯ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಎಚ್ಚೆತ್ತು, ಅಕ್ರಮ ಖಾತೆಗಳನ್ನು ಸರಿಪಡಿಸಿ ಮೂಲ ಖಾತೆದಾರರ ಹೆಸರಿಗೆ ನ್ಯಾಯಯುತವಾಗಿ ವರ್ಗಾಯಿಸಲು ಕ್ರಮ ಕೈಗೊಳ್ಳುವುದು ಆಡಳಿತದ ಆಧ್ಯ ಕರ್ತವ್ಯವಾಗಿದೆ” ಎಂದು ಕೆಆರ್‌ಎಸ್ ಪಕ್ಷದ ಮುಖಂಡ ಲತೀಶ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸಂಘಟನೆಗಳಿಗೆ ಎಲ್ಲರ ಸಹಕಾರ ಮುಖ್ಯ: ಎಚ್ ಎಸ್ ಜೋಗಣ್ಣವರ
“ಕಂದಾಯ ಮತ್ತು ಇತರ ಇಲಾಖೆಗಳಲ್ಲಿ ಇದೇ ರೀತಿಯ ನೂರಾರು ಅಕ್ರಮಗಳು ನಡೆಯುತ್ತಿದ್ದು, ಇದರ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿಯ ಪರವಾಗಿ ನಾವು ಹೋರಾಟ ನಡೆಸುತ್ತಿದ್ದೇವೆ. ಈ ಪ್ರಕರಣದಲ್ಲೂ ಕೂಡ ಸಂಘಟನೆ ಮತ್ತು ಪಕ್ಷ ಅವರಿಗೆ ಬೆಂಬಲವಾಗಿ ನಿಲ್ಲುತ್ತದೆ. ಈ ಕೂಡಲೇ ಸಮಸ್ಯೆಯನ್ನು ಪರಿಹಾರ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
