ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಮತ್ತು ವಕ್ಫ್ ಬೋರ್ಡ್ ಜಮೀನು ಮತ್ತು ಆಸ್ತಿಗಳ ಇಂಡೀಕರಣ ವಿವಾದ ಜೋರಾಗಿ ಸದ್ದು ಮಾಡುತ್ತಿದ್ದು, ರೈತರ ಜಮೀನುಗಳನ್ನು ವಕ್ಸ್ ಬೋರ್ಡ್‌ಗೆ ನೀಡಿರುವುದು ಬೆಳಕಿಗೆ ಬಂದಿರುವುದರಿಂದ ವಿವಾದ ಸೃಷ್ಟಿಸಿದೆ.
ವಕ್ಫ್ ಆಸ್ತಿ ವಿವಾದದಿಂದ ರೈತರು ಒಳಗೊಂಡಂತೆ ಹಿಂದೂ, ಕ್ರೈಸ್ತ, ಮುಸ್ಲಿಂ ಬಾಂಧವರು ಆತಂಕಕ್ಕೆ ಒಳಗಾಗಿದ್ದಾರೆ. ಇದರ ಭಯ ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕಾನೂನು ಜಾರಿಗೆ ತರಬೇಕು. ಅನಧಿಕೃತವಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ ಭೂಮಿಗಳ ಮೇಲೆ ವಕ್ಸ್ ಹಿಡಿತ ಸಾಧಿಸುವುದನ್ನು ತಡೆಯಬೇಕು ಎಂದು ಚಿತ್ರದುರ್ಗ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಕ್ಕೆ ಮಾತನಾಡಿದ ಅವರು, “ವಿಜಯಪುರ, ಹಾವೇರಿ, ಬಾಗಲಕೋಟೆ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಿಂದ ರೈತರು ಹಾಗೂ ಶ್ರೀಸಾಮಾನ್ಯರ ಭೂಮಿಯ ಅತಿಕ್ರಮಣದ ವಿವರಗಳು ನಿತ್ಯವೂ ಹೊರ ಬರುತ್ತಿವೆ. ಹಲವು ಜಿಲ್ಲೆಗಳಲ್ಲಿ ರೈತರು, ಶ್ರೀಸಾಮಾನ್ಯರು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಸಂಬಂಧಿತರ ಸಚಿವರು ವಕ್ಫ್ ಆಸ್ತಿ ಅತಿಕ್ರಮಣದ ನೆಪದಲ್ಲಿ ರೈತರಿಗೆ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿರುವುದು ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ” ಎಂದು ತಿಳಿಸಿದರು.
“ಸರ್ಕಾರ ಇದನ್ನು ಗಂಭೀರ ವಿಷಯವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು. ಸೂಕ್ತ ತೀರ್ಮಾನ ಕೈಗೊಳ್ಳುವುದರ ಮೂಲಕ ವಕ್ಫ್ ಆಕ್ರಮಣ ನೀತಿಗೆ ತಡೆ ನೀಡಬೇಕು. ಅಗತ್ಯ ಬಂದಲ್ಲಿ 1975ರ ಗೆಜೆಟ್ ನೋಟಿಫಿಕೇಷನ್ ಹಿಂದಕ್ಕೆ ಪಡೆಯಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಜಾಮಿಯಾ ಮಸೀದಿ ಅಧ್ಯಕ್ಷರಾಗಿ 18 ವರ್ಷ ಸೇವೆ ಸಲ್ಲಿಸಿದ್ದ ಜನಾಬ್ ಅಬ್ದುಲ್ ವಾಜಿದ್ ಸಾಬ್ ವಿಧಿವಶ
ಸಿಎಂ ಸಿದ್ದರಾಮಯ್ಯ ಹಾಲಿ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆದಿರಬಹುದು. ಇದು ತಾತ್ಕಾಲಿಕ ಕ್ರಮವಾಗುತ್ತದೆ. ಮುಂದೆ ಬರುವ ಸರ್ಕಾರಗಳು ಇದೇ ನೀತಿ ಅನುಸರಿಸುತ್ತಾರೆನ್ನುವ ಖಚಿತತೆ ಇಲ್ಲ. ಈ ಹಿನ್ನೆಲೆಯಲ್ಲಿ ಈಗಲೇ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಜನಸಾಮಾನ್ಯರ ಆತಂಕವನ್ನು ದೂರ ಮಾಡುವತ್ತ ರಾಜ್ಯ ಸರ್ಕಾರ ಕಟ್ಟುನಿಟ್ಟಾದ, ಸ್ಪಷ್ಟವಾದ ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದರು.