ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಲೋ ಬಿಪಿಯಿಂದ ಮೃತಪಟ್ಟಿದ್ದಾರೆ.
ಚಳ್ಳಕೆರೆ ಪಟ್ಟಣದ ವಿಠಲ ನಗರದ ಯಶೋಧಮ್ಮ (55) ಮೃತ ಮಹಿಳಾ ಸಿಬ್ಬಂದಿ. ಯಶೋದಮ್ಮ ಅವರು ಲೋ ಬಿಪಿಯಿಂದಾಗಿ ಅಸ್ವಸ್ಥಗೊಂಡಿದ್ದರು. ಇವರನ್ನು ಕೂಡಲೇ ಚಳ್ಳಕೆರೆ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಚಳ್ಳಕೆರೆ ತಹಶೀಲ್ದಾರ್ ರೆಹನ್ ಪಾಷಾ ಅವರನ್ನು ಸಂಪರ್ಕಿಸಿದಾಗ ಮಾತನಾಡಿ, “ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಯಶೋಧ ಎಂಬುವವರಿಗೆ ಮುಂಚಿನಿಂದಲೂ ಶುಗರ್ ಇತ್ತೆಂಬುದು ತಿಳಿದುಬಂದಿದೆ. ಅವರು ಕರ್ತವ್ಯಕ್ಕೆ ಬರುವಾಗ ಆರಾಮಾಗಿಯೇ ಇದ್ದರು. ಸುಮಾರು 11ರವರೆಗೆ ಕೆಲಸವನ್ನೂ ಮಾಡಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಕ್ರಮ ಮದ್ಯ ಮಾರಾಟ ನಿಲ್ಲಿಸದಿದ್ದರೆ ಚುನಾವಣೆ ಬಹಿಷ್ಕಾರ; ಗ್ರಾಮಸ್ಥರ ಎಚ್ಚರಿಕೆ
“ಬೆಳಿಗ್ಗೆ 11ರ ಬಳಿಕ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದ್ದಾರೆ. ಅವರನ್ನು ಕೂಡಲೇ ಗ್ರಾಮದಿಂದ ಕೇವಲ 6ಕಿಮೀ ದೂರದಲ್ಲಿರುವ ಚಳ್ಳಕೆರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮೃತಪಟ್ಟಿದ್ದಾರೆ” ಎಂದು ಪ್ರತಿಕ್ರಿಯಿಸಿದರು.
ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಚಳ್ಳಕೆರೆ ಆಸ್ಪತ್ರೆಗೆ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
