ಇನ್ನೊವಾ ಕಾರು ಮತ್ತು ಲಾರಿ ನಡುವಿನ ಭೀಕರ ಅಪಘಾತಕ್ಕೆ ಬೆಂಗಳೂರಿನ ಮೂಲದ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಬಳಿ ರಾಷ್ಟ್ರೀಯ ಹೆದ್ದಾರಿ 48ರ ರಿಂಗ್ ರಸ್ತೆಯ ಹೊರವಲಯದ ಸಿಬಾರ ಬಳಿ ನಡೆದಿದೆ.
ಬೆಂಗಳೂರು ಮೂಲದ ಬಿ ಎಂ ಟಿ ಸಿ ನಿವೃತ್ತ ನೌಕರ ಶಾಂತಮೂರ್ತಿ, ರುದ್ರಸ್ವಾಮಿ, ಮಲ್ಲಿಕಾರ್ಜುನ ಹಾಗೂ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಎಲ್ಲರೂ ಧಾರವಾಡದ ಬಳಿ ಇರುವ ಸೌದತ್ತಿ ರೇಣುಕಾ ಎಲ್ಲಮ್ಮ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ವಾಪಸ್ ಬೆಂಗಳೂರಿಗೆ ಹಿಂತಿರುಗುತ್ತಿದ್ದರು ಎನ್ನಲಾಗಿದೆ. ಅತಿ ವೇಗವಾಗಿ ಚಲಿಸುತ್ತಿದ್ದ ಇನೋವಾ ಕಾರು ಚಾಲಕನ ನಿಯಂತ್ರಣಕ್ಕೆ ಸಿಗದೆ ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ.

“ಘಟನೆ ಚಿತ್ರದುರ್ಗ ಸಿಬಾರ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅತಿ ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣಕ್ಕೆ ಸಿಗದೇ ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿಗೆ ಬಂದು ಅಪ್ಪಳಿಸಿದ್ದು ಅಪಘಾತದ ತೀವ್ರತೆಗೆ ಐವರು ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಲಾರಿ ಚಾಲಕರು ರಸ್ತೆ ಬದಿಯಲ್ಲಿ ಅಲ್ಲಲ್ಲಿ ಲಾರಿಗಳನ್ನು ನಿಲ್ಲಿಸುವುದು ಈ ತರಹದ ಘಟನೆಗಳಿಗೆ ಕಾರಣವಾಗಿದೆ. ಇದೇ ಸ್ಥಳದಲ್ಲಿ ವಾರದ ಹಿಂದೆಯಷ್ಟೇ ಅಪಘಾತವಾಗಿ ಮೂರು ಜನ ಸಾವನ್ನಪ್ಪಿದ್ದರು. ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ತಡೆಯಬೇಕು. ಈ ಬಗ್ಗೆ ರಸ್ತೆ ಹೆದ್ದಾರಿ ಗಸ್ತು ವಾಹನದವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಜೆಟ್ ನಲ್ಲಿ ನೇರಪಾವತಿಗೊಳಿಸದೆ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರಿಗೆ ಅನ್ಯಾಯ; ಪ್ರತಿಭಟನೆ.