ಅಗ್ನಿ ಅವಘಡದಿಂದ ಅಡಿಕೆ ಸೇರಿದಂತೆ ತೆಂಗಿನ ಮರಗಳು, ಹನಿ ನೀರಾವರಿ ಉಪಕರಣಗಳು ಬೆಂಕಿಗಾಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕ್ಯಾದಿಗುಂಟೆ ಗ್ರಾಮದಲ್ಲಿ ನಡೆದಿದೆ.
ಚಳ್ಳಕೆರೆ ತಾಲೂಕಿನ ಕ್ಯಾದಿಗುಂಟೆ ಗ್ರಾಮದ ಶಿವಾನಂದಪ್ಪ ಎನ್ನುವವರಿಗೆ ಸುಮಾರು 1700 ಅಡಿಕೆ ಮರಗಳು, ನೂರಕ್ಕೂ ಹೆಚ್ಚು ತೆಂಗಿನ ಮರಗಳು, ಹಾನಿ ನೀರಾವರಿ ಉಪಕರಣಗಳು ಸೇರಿದಂತೆ ಇತರೇ ಮರಗಳು ಬೆಂಕಿಗಾಹುತಿಯಾಗಿ ಜೀವನಾಧಾರವಾಗಬೇಕಿದ್ದ ತೋಟ ಸುಟ್ಟು ಹೋಗಿರುವುದು ರೈತನಿಗೆ ಬರಸಿಡಿಲು ಬಡಿದಂತಾಯಿತು.

“ಸುಮಾರು ಎಂಟು ವರ್ಷ ವಯಸ್ಸಿನ ಅಡಿಕೆ ಮರಗಳು ಸುಟ್ಟು ಹೋಗಿದ್ದು, ಸಂಪೂರ್ಣವಾಗಿ ನಾಶವಾಗುವ ಅಂತ ತಲುಪಿವೆ. ಎಂಟತ್ತು ವರ್ಷಗಳಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಾಕಿದ್ದ ಅಡಿಕೆ ತೋಟ ಮತ್ತು ತೆಂಗಿನ ಮರಗಳು ಆಕಸ್ಮಿಕ ಬೆಂಕಿಗಾಹುತಿಯಾಗಿದ್ದು , ಹೇಗೆ ಬೆಂಕಿ ತಗುಲಿದೆ ಎನ್ನುವ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಅಡಿಕೆ ತೋಟ ಈ ವರ್ಷದಿಂದ ಫಲ ಬಿಡಲು ಶುರು ಮಾಡಿದ್ದು ರೈತ ಶಿವಾನಂದಪ್ಪನ ಮುಂದಿನ ಜೀವನಾಧಾರವಾಗಬೇಕಿದ್ದ ತೋಟ ನಾಶವಾಗಿದ್ದು, ಸಾಲದ ಹೊರೆ ಹೇಗೆ ಎದುರಿಸಬೇಕು ಎಂದು ತಿಳಿಯದಾಗಿದೆ. ಸಾಲ ಮಾಡಿ ಬೋರ್ವೆಲ್ಗಳನ್ನು ಕೊರೆಸಿ, ಇಷ್ಟು ವರ್ಷ ತೋಟವನ್ನು ಸಾಕಿದ್ದೇವೆ. ಈಗ ತೋಟ ಬೆಂಕಿಗಾಹುತಿಯಾಗಿರುವುದು ನಾವು ವಿಷ ಕುಡಿಯುವ ಪರಿಸ್ಥಿತಿಯನ್ನು ತಂದಂತಾಗಿದೆ” ಎಂದು ರೈತ ಅಳಲನ್ನು ತೋಡಿಕೊಂಡರು.

ಸ್ಥಳಕ್ಕೆ ತೋಟಗಾರಿಕೆ, ಹಿರಿಯ ನಿರ್ದೇಶಕ ವಿರೂಪಾಕ್ಷಪ್ಪ, ಕಂದಾಯ ನಿರೀಕ್ಷಕ ರಾಜೀವ್ ಭೇಟಿ ನೀಡಿದ್ದು ‘ಅಡಿಕೆ ತೋಟ ಬೆಂಕಿಯಾಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಿದ್ದು, ವರದಿ ನೀಡುತ್ತೇವೆ. ಸರ್ಕಾರದಿಂದ ಬರುವ ಪರಿಹಾರವನ್ನು ರೈತರಿಗೆ ಕೊಡಿಸಲು ಅಗತ್ಯಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಹಬ್ಬಕ್ಕೆ ಗ್ರಾಮ ಸ್ವಚ್ಛಗೊಳಿಸದ ಬಂಡ ಅಧಿಕಾರಿಗಳು, ರೊಚ್ಚಿಗೆದ್ದ ವೃದ್ಧನಿಂದ ಚರಂಡಿ ಸ್ವಚ್ಛತೆ.
ಸ್ಥಳಕ್ಕೆ ಅಖಂಡ ಕರ್ನಾಟಕ ರೈತ ಸಂಘದ ಮುಖಂಡರಾದ ನಾಗರಾಜ್, ಚಿದಾನಂದಗೌಡ , ದೇವೇಂದ್ರಪ್ಪ, ಹನುಮಂತರಾಯ ಸೇರಿದಂತೆ ಹಲವು ರೈತರು ಸ್ಥಳದಲ್ಲಿದ್ದು, “ಕಳೆದ ವರ್ಷ ಬೇರೊಬ್ಬ ರೈತರ ಬೆಳೆ ಸುಟ್ಟು ಹೋಗಿದೆ. ಅವರಿಗೆ ಇದುವರೆಗೂ ಪರಿಹಾರ ಬಂದಿಲ್ಲ. ಈಗ ಶಿವಾನಂದಪ್ಪನ ತೋಟ ಸುಟ್ಟಿದೆ. ಹತ್ತು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಕೂಡಲೇ ಜಿಲ್ಲಾಡಳಿತ ಮತ್ತು ಸ್ಥಳೀಯ ಅಧಿಕಾರಿಗಳು ರೈತನಿಗೆ ನ್ಯಾಯ ಒದಗಿಸಿ ಅಗತ್ಯ ಕ್ರಮ ಕೈಗೊಂಡು ಸೂಕ್ತ ಪರಿಹಾರ ಒದಗಿಸಿಕೊಡಬೇಕು” ಎಂದು ಒತ್ತಾಯಿಸಿದರು.