ಗ್ರಾಮಗಳಲ್ಲಿ ಹಬ್ಬ ಹರಿದಿನ, ಜಾತ್ರೆಗಳು ಬಂದಿತೆಂದರೆ ಆರಂಭಕ್ಕೆ ಮುನ್ನ ಚರಂಡಿ, ರಸ್ತೆ ಸೇರಿದಂತೆ ಗ್ರಾಮವನ್ನು ವರ್ಷಕ್ಕೆ ಒಂದೆರಡು ಬಾರಿ ಸ್ವಚ್ಛಗೊಳಿಸುವುದು ಮಾಮೂಲಿ. ಆದರೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸದೇ ತುಂಬಿ ದುರ್ವಾಸನೆ ಸೂಸುವ ಚರಂಡಿಯನ್ನು ಸ್ವಚ್ಛಗೊಳಿಸದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು, ಆಡಳಿತದ ವಿರುದ್ಧ ರೊಚ್ಚಿಗೆದ್ದ ವೃದ್ಧ ಹನುಮಂತಪ್ಪ ಯುಗಾದಿ ಹಬ್ಬದ ಆರಂಭಕ್ಕೆ ಮುನ್ನ ತಾನೇ ಚರಂಡಿಗಿಳಿದು ಸ್ವಚ್ಛ ಮಾಡಿದ ಘಟನೆ ನಡೆದಿದೆ.

ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಈ ನಿರ್ಲಕ್ಷ್ಯದಿಂದ ಬೇಸತ್ತು ವೃದ್ದ ಹನುಮಂತಪ್ಪ ಎಂಬ ವ್ಯಕ್ತಿ ತಮ್ಮ ಮನೆಯ ಮುಂಭಾಗದಲ್ಲಿ ಚರಂಡಿಯನ್ನು ಅವರೇ ಸ್ವಚ್ಛತೆ ಮಾಡಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಗ್ರಾಮಸ್ಥರು, ಸಾರ್ವಜನಿಕರು ಬಂಡ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಿದೆ. ಇತ್ತ ಕಡೆ ಗಮನ ಹರಿಸಿ ಕ್ರಮ ಕೈಗೊಳ್ಳುತ್ತಾರಾ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಇತ್ತೀಚಿಗೆ ಗ್ರಾಮಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಸ್ವಚ್ಛತೆ ಗ್ರಾಮಗಳಲ್ಲಿ ಮರೀಚಿಕೆಯಾಗಿದೆ. ಕಸ ಸಂಗ್ರಹಕ್ಕೆ ನಿಯೋಜಿಸಿದ್ದ ಕಸಸಂಗ್ರಹ ಗಾಡಿಗಳು ಗ್ರಾಮ ಪಂಚಾಯಿತಿ ಮುಂದೆಯೇ ಕಸವಾಗುತ್ತಿದೆ. ಬಹಳಷ್ಟು ಹಳ್ಳಿಗಳು ಪ್ಲಾಸ್ಟಿಕ್ ಕಸದ ತ್ಯಾಜ್ಯದಿಂದ ತುಂಬಿ ತುಳುಕುತ್ತಿವೆ. ಇದರ ಬಗ್ಗೆ ಗಮನಹರಿಸಬೇಕಿದ್ದ ಅಧಿಕಾರಿಗಳು ತಮ್ಮ ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮರಳುಗಾರಿಕೆ ನಿಷೇಧಿಸಿ, ತುಂಗಭದ್ರ ನದಿ ಸಂರಕ್ಷಣೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ.