ಬಸವಣ್ಣ, ಡಾ.ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ರವರು ಜೀವನದುದ್ದಕ್ಕೂ ಅಸಮಾನತೆ, ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದ ಮಹನೀಯರು ಎಂದು ಚಿತ್ರದುರ್ಗದಲ್ಲಿ ದಲಿತ ಸಂಘರ್ಷ ಸಮಿತಿಯ (ಪ್ರೊ.ಕೃಷ್ಣಪ್ಪ) ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಸ್ಮರಿಸಿದರು.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ಆಯೋಜಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜಯಂತಿ ಹಾಗೂ ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ 118ನೇ ಜಯಂತಿ ಹಾಗೂ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು “ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿಶ್ವ ಜ್ಞಾನಿಯಾಗಿದ್ದು, ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ನೀಡಿದ್ದಾರೆ. ಬಾಬು ಜಗಜೀವನ್ ರಾಮ್ ಅವರು ಕೂಡ ದಲಿತರ ಏಳಿಗೆಗಾಗಿ ಶ್ರಮಿಸಿದ್ದಾರೆ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಅಸ್ಪೃಶ್ಯತೆ, ಜಾತಿ ನಿರ್ಮೂಲನೆಗಾಗಿ ಶ್ರಮಿಸಿದ್ದಾರೆ. ಈ ಮೂವರು ಮಹನೀಯರ ಜಯಂತಿಗಳನ್ನು ಒಟ್ಟಿಗೆ ಆಚರಿಸುತ್ತಿರುವುದು ವಿಶೇಷ” ಎಂದು ಅಭಿಪ್ರಾಯಪಟ್ಟರು.

“ಇಂದು ಅಸ್ಪೃಶ್ಯತೆ ತಾಂಡವವಾಡುತ್ತಿದೆ. ದಲಿತರು ಮುಂಚೂಣಿಗೆ ಬಂದರೆ ಸಹಿಸುವುದಿಲ್ಲ. ಹಲ್ಲೆ ಮಾಡುವ ಕೆಲಸ ನೆಡೆಯುತ್ತಿದೆ. 12ನೆಯ ಶತಮಾನದಲ್ಲಿಯೇ ಬಸವಣ್ಣನವರು ಸಮಾಜದ ಅಸಮಾನತೆ ವಿರುದ್ಧ ಹೋರಾಟ ಪ್ರಾರಂಭಿಸಿದರು. ಅಂದು ದೇವಸ್ಥಾನದ ಪ್ರವೇಶ ಇರಲಿಲ್ಲ. ಕೆರೆ ಬಾವಿಗಳನ್ನು ಮುಟ್ಟಿ ಉಪಯೋಗಿಸುವ ಹಾಗಿರಲಿಲ್ಲ. ಸಾಮಾಜಿಕವಾಗಿ ದೂರ ಇಟ್ಟಂತಹ ಕಾಲದಲ್ಲಿ ಬಸವಣ್ಣನವರು ನಮಗೆ ಬೆಳಕಾಗಿ ಬಂದವರು. ನಂತರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಸ್ಪೃಶ್ಯತೆ ನಿವಾರಣೆಗೆ ಸಮಾನತೆಗೆ ಜೀವನದುದ್ದಕ್ಕೂ ಹೋರಾಟ ನೆಡೆಸಿದ್ದರು. ದಲಿತ ಸಂಘರ್ಷ ಸಮಿತಿಯು ಪ್ರೊ. ಕೃಷ್ಣಪ್ಪನವರ ಆಶಯದಂತೆ ಅಂಬೇಡ್ಕರ್ ಅವರ ಸಾಮಾಜಿಕ ಸಮಾನತೆ, ಅವರ ವಿಚಾರಧಾರೆಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡುತ್ತಿದೆ” ಎಂದು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜಯಂತಿ ಹಾಗೂ ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ 118ನೇ ಜಯಂತಿ ಹಾಗೂ ಬಸವೇಶ್ವರ ಜಯಂತಿಯ ಕಾರ್ಯಕ್ರಮದಲ್ಲಿ ದಲಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮನೆಗೊಂದು ಸಸಿ ವಿತರಣೆ ಮಾಡುವ ಮೂಲಕ ಆಚರಿಸಿದ್ದು ವಿಶೇಷವಾಗಿತ್ತು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಅಪಘಾತ, ಓರ್ವ ಸಾವು.

ಕಾರ್ಯಕ್ರಮದಲ್ಲಿ ದಸಂಸ ಗ್ರಾಮ ಶಾಖೆ ಅಧ್ಯಕ್ಷ ಮಂಜುನಾಥ, ಶಾಖೆ ಸಂಚಾಲಕ ಡಿ ರಾಮ, ಗೌರವ ಉಪಸ್ಥಿತಿಯಪ್ಪ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯ್ಯಣ್ಣ, ಕೆಇಬಿ ಇಂಜಿನಿಯರ್ ವಿಜಯಕುಮಾರ್, ಪ್ರೊಫೆಸರ್ ವಿ ನಾಗಪ್ಪ, ಚಿತ್ರಹಳ್ಳಿ ಉಪನಿರೀಕ್ಷಕ ಕಾಂತರಾಜ್, ದಸಂಸ ಮುಖಂಡರಾದ ನವೀನ್ ಮದ್ದೇರು, ಸುಂದರಮೂರ್ತಿ, ಕುಬೇರಪ್ಪ, ಜಗದೀಶ್, ರಂಗಪ್ಪ, ಅಶೋಕ್, ಮನು, ಸ್ವಾಮಿ, ಕಲ್ಲೇಶ್, ರಘು, ದಿವಾಕರ್, ಅಜ್ಜಪ್ಪ, ಶೇಖರಪ್ಪ, ಜಯಪ್ಪ, ಲೋಕಪ್ಪ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.