“ಈ ನೆಲದ ಬಹುಸಂಖ್ಯಾತರದ್ದು ಶೋಷಣೆಯ ಬದುಕಾಗಿತ್ತು. ಅವರ ನೋವು ಅರಿಯಲು ಬುದ್ಧ ಸಾಮ್ರಾಜ್ಯವನ್ನು ತ್ಯಜಿಸಿದರು” ಎಂದು ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ನಡೆದ “ಪ್ರಜಾಪ್ರಭುತ್ವ ಮತ್ತು ತುರ್ತು ಪರಿಸ್ಥಿತಿ” ಕುರಿತ ಸಂವಾದದಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.
ಚಿತ್ರದುರ್ಗ ನಗರದ ಹೊರ ವಲಯದಲ್ಲಿರುವ ಭೋವಿ ಗುರುಪೀಠದಲ್ಲಿ “ಪ್ರಜಾಪ್ರಭುತ್ವ ಮತ್ತು ತುರ್ತು ಪರಿಸ್ಥಿತಿ” ಕುರಿತ ಸಂವಾದದಲ್ಲಿ ಮಾತನಾಡಿದ ಶ್ರೀಗಳು “ವೈಭವದ ಜೀವನವನ್ನು ಬುದ್ಧ ತ್ಯಜಿಸಿ ಬಹುಸಂಖ್ಯಾತರ ನೋವಿಗೆ ವಿಮೋಚನೆಯನ್ನು ನೀಡಿದರು. ಅವರ ಚಿಂತನೆಗಳು ಸಮಾಜದ ಪರಿವರ್ತನೆಗೆ ಬುನಾದಿಯಾಯಿತು” ಎಂದು ವಿಶ್ಲೇಷಿಸಿದರು.

“ದೇವ ಭಾಷೆಯನ್ನು ಯಾರಾದರೂ ಫಟಿಸಿದರೆ ನಾಲಿಗೆಯನ್ನು ಕತ್ತರಿಸುವ, ಕೇಳಿದರೆ ಕಿವಿಗೆ ಸೀಸ ಹಾಕುವ ಸಂದರ್ಭವಿತ್ತು. ಅದರಿಂದ ಹೊರ ಬರಲು ಪ್ರಶ್ನಿಸಬೇಕು ಎಂದು ಬುದ್ಧ, ಬಸವ ಹೇಳಿದ್ದಾರೆ. ಪ್ರಶ್ನಿಸಿಕೊಳ್ಳದೆ ಯಾವುದನ್ನು ಒಪ್ಪಬಾರದು ಎಂದಿದ್ದಾರೆ. ಅಲ್ಲಮಪ್ರಭು ದೇವರನ್ನು ಪ್ರಶ್ನಿಸುವ ಪರಿಯನ್ನ ವಚನಗಳಲ್ಲಿ ನೋಡುತ್ತೇವೆ. ಪ್ರಶ್ನೆ ಇಲ್ಲದಿದ್ದರೆ ಅಭಿವ್ಯಕ್ತಿ ಆಗಲಾರದು” ಎಂದು ತಿಳಿಸಿದರು.
“ಸಂವಿಧಾನದ ಸಮಾನತೆಯ ಆಶಯಗಳು ಈಡೇರಬೇಕಾದರೆ ಪ್ರಶ್ನಿಸುವ ಮನೋಭಾವ ರೂಡಿಮಾಡಿಕೊಳ್ಳಬೇಕು. ಶಿಕ್ಷಣವಂತರಾಗಿ ಜ್ಞಾನವನ್ನು ಪಡೆದು ಸರಿಯಾದ ಮಾದರಿಯಲ್ಲಿಯೇ ತರ್ಕಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಜ್ಞಾನ ಸರಿದಾರಿಯಲ್ಲಿ ನಡೆಸಿದರೆ, ವಿಧ್ಯೆ ಪ್ರಜ್ಞಾವಂತಿಕೆಯನ್ನು ಬೆಳೆಸುತ್ತದೆ, ಎರಡನ್ನೂ ಪ್ರತಿಪಾದಿಸುವ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು. ಪ್ರಶ್ನೆ ಕೇಳದವರು ಭಾರತವನ್ನು ವಿಶ್ವಗುರು ಮಾಡಲು ಹೇಗೆ ಸಾಧ್ಯವಾಗುತ್ತದೆ” ಎಂದು ಸೂಚ್ಯವಾಗಿ ಪ್ರಶ್ನಿಸಿದರು. .
“ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿತ್ತು, ಆ ಸಂದರ್ಭದಲ್ಲಿ ಕಷ್ಟಗಳನ್ನು ಕಂಡರೂ ಸಹ ಸದೃಢ ಭಾರತವನ್ನ ಕಟ್ಟುವಲ್ಲಿ ಸಂವಿಧಾನದ ಆಶಯಗಳು ನಿರಂತರವಾಗಿ ಕೆಲಸ ಮಾಡುತ್ತಿವೆ. ಸದೃಢ ಭಾರತ ನಿರ್ಮಾಣಕ್ಕೆ ಮೂಲಭೂತವಾಗಿ ಸಂವಿಧಾನವನ್ನು ಸರಿಯಾದ ಮಾದರಿಯಲ್ಲಿ ಅರ್ಥೈಸಿಕೊಂಡಾಗ ಮಾತ್ರ ಸಂಪೂರ್ಣ ಯಶಸ್ಸು ಕಾಣಲು ಸಾಧ್ಯ. ಪ್ರಜೆಗಳನ್ನ ತುಳಿಯಬಾರದು” ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ವಿ. ನಾಗರಾಜು ಮಾತನಾಡಿ “ಗುಜರಾತ್, ಬಿಹಾರದಲ್ಲಿ ಉಂಟಾದ ಹರಾಜಕತೆಯ ಪರಿಸ್ಥಿತಿ ಮತ್ತು ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯನ್ನು ಭಾರತದಲ್ಲಿ ಜಾರಿ ಮಾಡಲಾಯಿತು, ವ್ಯವಸ್ಥೆಯಲ್ಲಿ ವಿರೋಧಪಕ್ಷದವರ ಟೀಕೆಗೆ ಹೆಚ್ಚು ಒಳಗಾಗಬೇಕಾಯಿತು. ಆದರೆ ಕರ್ನಾಟಕದಲ್ಲಿ ದೇವರಾಜ್ ಅರಸ್ ರವರು ಮುಖ್ಯಮಂತ್ರಿಯಾಗಿದ್ದರಿಂದ ತುರ್ತು ಪರಿಸ್ಥಿತಿಯ ಪರಿಣಾಮ ಕರ್ನಾಟಕದಲ್ಲಿ ಭಿನ್ನವಾಗಿತ್ತು, ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ವಿವಿಧ ಯೋಜನೆಗಳನ್ನು ಮತ್ತು ಬಡತನ ನಿವಾರಣೆಗೆ 20 ಅಂಶಗಳ ಕಾರ್ಯಕ್ರಮ ರೂಪಿಸಿದರು, ಭೂ-ಒಡೆತನ, ಜೀತಪದ್ಧತಿ ನಿರ್ಮೂಲನೆ ಮಾಡಿದರು. ಹಿಂದುಳಿದ ಅಲ್ಪಸಂಖ್ಯಾತ ವರ್ಗಗಳಿಗೆ ಸಾಮಾಜಿಕ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟರು, ಶಿಕ್ಷಣ ಉದ್ಯೋಗದಲ್ಲಿ ಅವಕಾಶ ಒದಗಿಸುವಂತೆ ಶ್ರಮಿಸಿದರು, ತುರ್ತು ಪರಿಸ್ಥಿತಿಯನ್ನ ಉತ್ತಮ ಕಾರ್ಯಗಳಿಗೆ ಉಪಯೋಗಿಸಿಕೊಂಡ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸೈನಿಕ ಹುಳುಗಳ ಹಾವಳಿಗೆ ನಲುಗಿದ ಮೆಕ್ಕೆಜೋಳ; ರೈತರ ನೆರವಿಗೆ ಬರಬೇಕಿದೆ ಕೃಷಿ ವಿಜ್ಞಾನ, ಸರ್ಕಾರ
ಕಾರ್ಯಕ್ರಮದಲ್ಲಿ ಯಾದವ ಗುರುಪೀಠದ ಶ್ರೀ ಕೃಷ್ಣಯಾದವನಂದ ಸ್ವಾಮೀಜಿ, ಕುಂಬಾರ ಗುರುಪೀಠದ ಕುಂಬಾರಗುಂಡಯ್ಯ ಸ್ವಾಮೀಜಿ, ಹಿರಿಯ ಪತ್ರಕರ್ತರಾದ ಎಂ.ಎಸ್.ರಾಜೇಂದ್ರಕುಮಾರ್, ಎ.ಎಸ್.ನಾರಾಯಣಸ್ವಾಮಿ ಮತ್ತು ಮಾಜಿ ಕಾರ್ಮಿಕ ಅಧಿಕಾರಿ ಎಂ.ಬಾಲಕೃಷ್ಣ, ಭೋವಿ ಗುರುಪೀಠದ ಸಿ.ಇ.ಓ ಗೌನಹಳ್ಳಿ ಗೋವಿಂದಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.