ದಲಿತ ಜಾತಿಯವನೆಂಬ ಕಾರಣಕ್ಕೆ ಮುಖ್ಯ ಶಿಕ್ಷಕರು ಎಸ್ಡಿಎಂಸಿ ಅಧ್ಯಕ್ಷನಿಗೆ ಅವಮಾನಕರವಾಗಿ ಮಾತನಾಡುವುದು, ಮಾಹಿತಿ ನೀಡದೇ ತಿರಸ್ಕಾರ, ದಲಿತರ ಮತ್ತು ದಲಿತ ವಿದ್ಯಾರ್ಥಿಗಳ ಬಗ್ಗೆ ತಾರತಮ್ಯ ಹಾಗೂ ಬೆದರಿಕೆಯನ್ನು ಹಾಕಿದ್ದಾರೆ ಎಂದು ಆರೋಪಿಸಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಹೋಬಳಿಯ ಕಡೆಹುಡೇ ಗ್ರಾಮದ ಜನರು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
‘ಕಡೆಹುಡೇ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಇವರಲ್ಲಿ ಬಹುಪಾಲು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರು. ಈ ಶಾಲೆಯ ಮುಖ್ಯ ಶಿಕ್ಷಕ ಬಸವರಾಜು, ಸಹ ಶಿಕ್ಷಕರಾಗಿ ಬಂದು, ಮುಖ್ಯೋಪಾಧ್ಯಾಯರಾಗಿ ಅವರು ಕಳೆದ 22 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಪರಿಶಿಷ್ಟ ಜಾತಿಯವರ ಬಗ್ಗೆ ಅಸಹನೆಯನ್ನು ಹೊಂದಿ ತಾರತಮ್ಯವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಅಯ್ಕೆಯಾದ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಎ.ಓಬಯ್ಯ ರವರು ಪರಿಶಿಷ್ಟ ಜಾತಿಯವರಾಗಿದ್ದು, ಇವರನ್ನು ಬಸವರಾಜ ರವರು ಜಾತಿಯ ಕಾರಣಕ್ಕೆ ಹಲವು ಬಾರಿ ಅಗೌರವವಾಗಿ ಮಾತನಾಡಿ ಅವಮಾನಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಓಬಯ್ಯ ನ್ಯಾಯಯುತವಾಗಿ ಕೇಳುವ ಯಾವುದನ್ನೂ ಸಹಿಸುವುದಿಲ್ಲ, ಉತ್ತರಿಸುವುದಿಲ್ಲ. ಬದಲಿಗೆ “ನಿನಗೆ ಏನು ಮಾಡುತ್ತೇನೆ ನೋಡುತ್ತಿರು, ನಾನು ಏನು ಅಂತ ತೋರಿಸುತ್ತೇನೆ” ಎಂದು ಬೆದರಿಕೆಯನ್ನು ಸಹ ಹಾಕಿರುತ್ತಾರೆ. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಎ.ಓಬಯ್ಯ ರವರು ತಮ್ಮ ಸ್ವಂತ ಖರ್ಚಿನಿಂದ ಶಾಲಾ ಮಕ್ಕಳಿಗೆ ಪ್ರೋತ್ಸಾಹಕವಾಗಿ ಕೊಡುಗೆಗಳನ್ನು ನೀಡಿದರೇ, ಈ ರೀತಿಯ ಕೆಲಸವನ್ನು ಅವಮಾನಿಸುವಂತೆ “ಮುಂದಿನ ದಿನಗಳಲ್ಲಿ ನೀವು ಮಕ್ಕಳಿಗೆ ಯಾವುದೇ ಕೊಡುವ ಅಗತ್ಯವಿಲ್ಲ” ಎಂದು ಹೇಳಿರುತ್ತಾರೆ. ಈ ರೀತಿಯ ವೈಯಕ್ತಿಕ ನೆಲೆಯಲ್ಲಿ ಅವಮಾನಿಸುತ್ತಾ ಶಾಲೆಯ ಅಭಿವೃದ್ಧಿಗೂ ಪ್ರತಿಕೂಲವಾಗಿ ನಡೆದುಕೊಳ್ಳುತ್ತಾರೆ’ ಎಂದು ದೂರಲಾಗಿದೆ.
‘ಕೆ ಬಸವರಾಜರವರು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ವಿಷಯ ಪಠ್ಯ ಬೋಧನೆಯನ್ನು ಮಾಡುತ್ತಿರುವುದಿಲ್ಲ. ಬಿಸಿಯೂಟದ ಕೆಲಸದವರ ಬದಲು ಊಟ ಬಡಿಸುವ ಕೆಲಸಕ್ಕೆ ಶಿಕ್ಷಕಿಯನ್ನು, ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತದೆ. ಗ್ರಾಮದ ಕೆಲವರೊಂದಿಗೆ ಸೇರಿ ಗುಂಪುಗಾರಿಕೆಯನ್ನು ನಡೆಸುತ್ತಾರೆ. ನಿಯಮಿತವಾಗಿ ಪೋಷಕರ ಸಭೆ ನಡೆಸದೆ ಸಬೂಬು ಹೇಳುತ್ತಾರೆ. ಗ್ರಾಮೀಣ ಪೋಷಕರ ಪ್ರತಿನಿಧಿಗಳನ್ನು ಅಪಹಾಸ್ಯ ಮಾಡಿ ಮಾತನಾಡಿರುತ್ತಾರೆ. ಶಾಲೆಗೆ ಬರುವ ಅಡುಗೆ ಪದಾರ್ಥಗಳ ಬಗ್ಗೆ ಲೆಕ್ಕ ಕೊಡುವುದಿಲ್ಲ, ಎಸ್.ಡಿ.ಎಂ.ಸಿ ಯನ್ನೇ ರದ್ದು ಮಾಡಬೇಕು ಎನ್ನುತ್ತಾರೆ’ ಎಂದು ಆರೋಪಿಸಲಾಗಿದೆ.
‘ಇವರ ಕಾರ್ಯವೈಖರಿ ಸರಿ ಇಲ್ಲ ಎಂಬುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ. ಹಾಗಾಗಿ, ಕೂಡಲೇ ಕ್ರಮವಹಿಸಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿ ನಮ್ಮ ಊರಿನ ಶಾಲೆಯ ಮತ್ತು ಮಕ್ಕಳ ಹಿತವನ್ನು ಬಯಸುವ ಶಿಕ್ಷಕರನ್ನು ನೇಮಿಸಿಕೊಡಬೇಕೆಂದು ತಮ್ಮಲ್ಲಿ ಕೋರುತ್ತಿದ್ದೇವೆ’ ಎಂದು ಮನವಿ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕೆಲಸದ ವೇಳೆ ನರೇಗಾ ಕಾರ್ಮಿಕ ಸಾವು, ದಿನ ಕಳೆದರೂ ಗಮನಹರಿಸದ ಅಧಿಕಾರಿಗಳು.
ಈ ಬಗ್ಗೆ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಓಬಯ್ಯ, “ಮುಖ್ಯ ಶಿಕ್ಷಕ ಬಸವರಾಜು ಅವರು ಲೆಕ್ಕಪತ್ರ, ಮಾಹಿತಿ ಸೇರಿ ಯಾವುದನ್ನು ಕೇಳಿದರೂ ನೀಡದೇ, ಅವಮಾನಕರವಾಗಿ ದಲಿತರಿಗೇಕೆ ಹೇಳಬೇಕು ಎನ್ನುವಂತೆ ವರ್ತಿಸುತ್ತಿದ್ದಾರೆ. ದಲಿತರ ಮಕ್ಕಳೇ ಹೆಚ್ಚು ಇರುವ ಶಾಲೆಯಲ್ಲಿ ಮಕ್ಕಳನ್ನು ಬಿಸಿಲಿನಲ್ಲಿ ನಿಲ್ಲಿಸಿ ಊಟ ನೀಡುತ್ತಾರೆ. ಹಲವು ಬಾರಿ ಈ ಬಗ್ಗೆ ನೆರಳಿನಲ್ಲಿ ಕೂರಿಸಿ ಊಟ ನೀಡಿ ಎಂದು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಅಡುಗೆ ಕೆಲಸಕ್ಕೆ ಇಬ್ಬರು ಮಹಿಳೆಯರು ಇದ್ದು, ಮೊದಲ ಮೂರು ದಿನ ಒಬ್ಬರೇ, ನಂತರದ ಮೂರು ದಿನಗಳ ಕಾಲ ಮತ್ತೊಬ್ಬರೇ ಅಡುಗೆ ಮಾಡುತ್ತಾರೆ. ಇದನ್ನು ಪ್ರಶ್ನಿಸಿ ಸರಿಮಾಡಿ ಎಂದು ತಿಳಿಸಿದರೂ ಸ್ಪಂದಿಸುತ್ತಿಲ್ಲ. ಇವೆಲ್ಲವನ್ನೂ ಪ್ರಶ್ನೆ ಮಾಡಿದರೆ, ಯಾರಿಗೆ ಬೇಕಾದರೂ ದೂರು ಕೊಡು. ಏನೂ ಮಾಡಲು ಸಾಧ್ಯವಿಲ್ಲ. ನಿನ್ನನ್ನು ಯಾವ ಸ್ಥಿತಿಗೆ ತರುತ್ತೇನೆ ನೋಡು. ನನ್ನ ತಂಟೆಗೆ ಬಂದರೆ ಸರಿ ಇರಲ್ಲ, ನಿನ್ನ ಏನು ಮಾಡುತ್ತೇನೆ ನೋಡು, ಎಂದು ಬೆದರಿಕೆ ಹಾಕಿದ್ದಾರೆ. ದೂರು ನೀಡಲು ಸಹಿ ಹಾಕಿದ ದಲಿತ ಗ್ರಾಮ ಪಂಚಾಯಿತಿ ಸದಸ್ಯನೊಬ್ಬರಿಗೂ ನನ್ನ ವಿರುದ್ಧವೇ ದೂರು ನೀಡುತ್ತೀರಾ? ನಿಮ್ಮೆಲ್ಲರಿಗೂ ಏನು ಮಾಡುತ್ತೇನೆ ನೋಡುತ್ತಿರಿ ಎಂದು ಬೆದರಿಕೆ ಹಾಕಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.