ಚಿತ್ರದುರ್ಗದ ಪ್ರವಾಸಿ ಮಂದಿರದ ಇಂದಿರಾ ಕ್ಯಾಂಟೀನಿಗೆ ಪೌರಾಡಳಿತ ಸಚಿವ ರಹೀಂ ಖಾನ್ ಭೇಟಿ ನೀಡಿ ಪರಿಶೀಲನೆ ನೆಡೆಸಿದರು. ಇಂದಿರಾ ಕ್ಯಾಂಟೀನಿನಲ್ಲಿ ಊಟ ಹಾಗೂ ಉಪಹಾರದ ಮೆನುಗೆ ಸಂಬಂಧಿಸಿದಂತೆ ದೂರುಗಳು ಕೇಳಿ ಬಂದಿದ್ದು, ಈ ಕುರಿತು ದೂರುಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಅಮಾನತು ಸೇರಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಎಚ್ಚರಿಸಿದರು.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರ ಪಕ್ಕದ ಇಂದಿರಾ ಕ್ಯಾಂಟೀನ್‍ಗೆ ಸಂಜೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ಇಂದಿರಾ ಕ್ಯಾಂಟೀನ್‍ನಲ್ಲಿ ಸಮರ್ಪಕವಾಗಿ ಮೆನು ಪ್ರಕಾರ ಊಟ ಹಾಗೂ ಉಪಹಾರ ನೀಡುತ್ತಿಲ್ಲ. ಹೊಸ ಮೆನು ನಿಗದಿಪಡಿಸಿ, ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬುದಾಗಿ ದೂರುಗಳು ಕೇಳಿಬಂದಿದ್ದವು” ಎಂದು ತಿಳಿಸಿದರು.
“ಈ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಅಮಾನತಿಗೆ ಕ್ರಮವಹಿಸಲಾಗುವುದು” ಎಂದು ಹೇಳಿದರು.
“ಇಂದಿರಾ ಕ್ಯಾಂಟೀನ್‍ನಲ್ಲಿ ಬೆಳಿಗಿನ ಉಪಹಾರಕ್ಕೆ ರೂ.5 ಹಾಗೂ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ರೂ.10 ದರ ನಿಗಧಿಪಡಿಸಲಾಗಿದೆ. ಆದಾಗ್ಯೂ ಸಹ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನದಾಗಿ ಹಣ ಪಡೆಯಲಾಗುತ್ತಿದೆ ಎಂಬ ದೂರುಗಳಿವೆ, ಹಾಗಾಗಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು” ಎಂದ ಸಚಿವ ರಹೀಂ ಖಾನ್, ಕ್ಯಾಂಟೀನ್‍ನಲ್ಲಿ ಊಟಕ್ಕಾಗಿ ತಯಾರಾಗಿದ್ದ ಚಪಾತಿ, ಪಲ್ಯ, ಅನ್ನ ಸಾಂಬಾರ್ ಸವಿದು, ಊಟದ ಗುಣಮಟ್ಟ ಪರಿಶೀಲಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಲೆಮಾರಿ ಸುಡಗಾಡು ಸಿದ್ದರ ಕಾಲೋನಿಗೆ ಸೋಲಾರ್ ಲೈಟ್ ವಿತರಣೆ; ಕೇತೇಶ್ವರ ಶ್ರೀ ಶ್ಲಾಘನೆ.
ಈ ಸಂದರ್ಭದಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಸೇರಿದಂತೆ ನಗರಸಭೆ ಅಧಿಕಾರಿಗಳು ಹಾಜರಿದ್ದರು.