ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣದ ಬಳಿಯ ಖಾಲಿ ಜಾಗದಲ್ಲಿ ನಗರಸಭೆ ಹೊಸದಾಗಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದೆ. ನಿರ್ಮಾಣ ಪ್ರಾರಂಭಿಸಿರುವ ಸಾರ್ವಜನಿಕ ಶೌಚಾಲಯ ಬೀದಿ ಬದಿ ವ್ಯಾಪಾರಿಗಳ, ಸಾರ್ವಜನಿಕರ ಸಮಸ್ಯೆಗೆ ಕಾರಣವಾಗಿದ್ದು, ಇದು ಸಾರ್ವಜನಿಕರ ಅಕ್ಷೇಪಕ್ಕೆ ಒಳಗಾಗಿದೆ. ಈಗಾಗಲೇ ಖಾಸಗಿ ಬಸ್ ನಿಲ್ದಾಣದ ಬಲಬದಿಯಲ್ಲಿ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಶೌಚಾಲಯವಿದೆ. ಅದು ಹಳೆಯದಾಗಿದೆ ಎನ್ನುವ ಕಾರಣಕ್ಕೆ ಹೊಸ ಜಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ನಗರಸಭೆ ಮುಂದಾಗಿದೆ. ಇದು ಈಗ ವಿವಾದದ ಕೇಂದ್ರ ಬಿಂದುವಾಗಿದೆ.

ದಿನಾಂಕ 10.02.2025 ರಂದು ಸೋಮವಾರ ಬೆಳಗ್ಗೆ 8 ಗಂಟೆ ಸಮಯದಲ್ಲಿ ನಗರಸಭೆಯ ಸಿಬ್ಬಂದಿಗಳು ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಬೀದಿ ಬದಿ ವ್ಯಾಪಾರಿಗಳನ್ನೆಲ್ಲ ಖಾಲಿ ಮಾಡಿಸಿದ್ದಾರೆ. ಕಾರಣ ಕೇಳಿದಾಗ ಅಲ್ಲಿ ಹೊಸದಾಗಿ ಶೌಚಾಲಯಗಳನ್ನು ನಿರ್ಮಾಣ ಯೋಜನೆಯಿದ್ದು, ನಿರ್ಮಾಣ ಕಾರ್ಯ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆಗ ಅಲ್ಲಿದ್ದ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಈಗಾಗಲೇ ಶೌಚಾಲಯವಿದೆಯಲ್ಲ? ಅದನ್ನೇ ನವೀಕರಣ ಮಾಡಬಹುದು. ಮತ್ತೆ ಏಕೆ ಇಲ್ಲಿ ಹೊಸದಾಗಿ ಕಟ್ಟುತ್ತಿದ್ದೀರಿ? ಎನ್ನುವ ಪ್ರಶ್ನೆಗೆ ಯಾವುದೇ ಉತ್ತರ ನೀಡದೆ ಕಾಮಗಾರಿ ಕೈಗೊಂಡಿದ್ದಾರೆ. ‘ಈಗಾಗಲೇ ಇರುವ ಶೌಚಾಲಯ ಸರಿಯಾದ ಸ್ಥಳದಲ್ಲಿದೆ. ಹೊಸ ನಿರ್ಮಾಣದ ಅಗತ್ಯವೇನು? ಹಳೆಯ ಶೌಚಾಲಯವನ್ನೇ ನವೀಕರಿಸಿ ಸ್ವಚ್ಛತೆಯಿಂದ ಇಟ್ಟುಕೊಂಡರೆ ಚೆನ್ನಾಗಿರುತ್ತದೆ’ ಎನ್ನುವ ಮಾತು ಕೇಳಿಬಂದಿದೆ.
‘ಹೊಸ ಶೌಚಾಲಯದ ನಿರ್ಮಾಣದಿಂದ ಹಳೆಯ ಶೌಚಾಲಯ ನಿರುಪಯುಕ್ತವಾಗುತ್ತದೆ. ಅಲ್ಲದೇ ಸುತ್ತಮುತ್ತ ಪ್ರದೇಶದಲ್ಲಿ ನಿವಾಸದ ಮನೆಗಳು, ಬೇಕರಿಗಳು, ಕಿರಾಣಿ ಅಂಗಡಿಗಳು, ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆಗಳು, ಸ್ಕ್ಯಾನಿಂಗ್ ಸೆಂಟರ್ ಜೊತೆಗೆ 40-50 ಬೀದಿಬದಿ ವ್ಯಾಪಾರಿಗಳಿದ್ದು, ಅಂಗಡಿಗಳಿಗೆ ತುಂಬಾ ಅನಾನುಕೂಲವಾಗಲಿದೆ, ಶೌಚಾಲಯದ ದುರ್ವಾಸನೆ ಪರಿಸರವನ್ನು ಕಲುಷಿತಗಳಿಸಲಿದೆ’ ಎಂದು ಸ್ಥಳೀಯರು ಆಪಾದಿಸಿದ್ದಾರೆ.ಇವರೆಲ್ಲರೂ ಲಕ್ಷಾಂತರಗಟ್ಟಲೆ ಬಂಡವಾಳವನ್ನು ಹಾಕಿ, ಬಾಡಿಗೆ ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಈ ಜಾಗದಲ್ಲಿ ಶೌಚಾಲಯ ನಿರ್ಮಿಸಿ ಅದರ ದುರ್ವಾಸನೆಯಿಂದ ಅಂಗಡಿಗಳಿಗೆ ಬರುವ ಗ್ರಾಹಕರ, ಜನಸಂಚಾರ ಸ್ಥಗಿತಗೊಳ್ಳುತ್ತದೆ. ಹಾಗೂ ಬೆಳಗ್ಗೆಯಿಂದ ರಾತ್ರಿವರೆಗೂ ಮೂಗು ಮುಚ್ಚಿಕೊಂಡು ವ್ಯಾಪಾರ ಮಾಡಬೇಕಾಗುವ ಸ್ಥಿತಿ ಬರುತ್ತದೆ. ಯಾಕೆಂದರೆ ಹಲವಾರು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ಜಾಗಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಯಾವ ರೀತಿ ಇದೆ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಆ ಸ್ಥಿತಿ ಇಲ್ಲಿ ಆಗುವುದು ಬೇಡ. ಇವರು ನಿರ್ಮಿಸುತ್ತಿರುವ ಶೌಚಾಲಯವು ಸೂಕ್ತ ಜಾಗದಲ್ಲಿ ಇಲ್ಲ’ ಎನ್ನುವ ಮಾತು ಕೇಳಿಬರುತ್ತಿದೆ.

ಈ ಬಗ್ಗೆ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ವೀರೇಶ್, “ಈಗಾಗಲೇ ಒಂದು ಶೌಚಾಲಯವು ನಿಲ್ದಾಣದ ಬಲಬದಿಯಲ್ಲಿದ್ದು, ಇನ್ನೊಂದು ಬದಿಯಲ್ಲಿ ಹೊಸ ಶೌಚಾಲಯದ ನಿರ್ಮಾಣ ಕೈಗೊಳ್ಳುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರ ನಾಗರಿಕರ ಜೊತೆ ಸಂಘ-ಸಂಸ್ಥೆಗಳ ಜೊತೆ ಯಾವುದೇ ಚರ್ಚೆ ಮಾಡಿಲ್ಲ. ಇದರಿಂದ ಅಲ್ಲಿರುವ ವ್ಯಾಪಾರಸ್ಥರಿಗೆ ತುಂಬಾ ತೊಂದರೆ ಆಗುತ್ತದೆ. ಅಲ್ಲಿರುವ ವ್ಯಾಪಾರಸ್ಥರು ಬೀದಿಗೆ ಬರುವ ಪರಿಸ್ಥಿತಿ ಉಂಟಾಗುತ್ತದೆ. ಸಿಕ್ಕಾಪಟ್ಟೆ ದುರ್ವಾಸನೆಯಿಂದ ಈ ಪ್ರದೇಶ ಮಲಿನವಾಗಲಿದೆ. ಈಗ ಇರುವ ಹಳೆಯ ಶೌಚಾಲಯವು ಸರಿಯಾದ ಜಾಗದಲ್ಲಿದೆ. ಪ್ರಯಾಣಿಕರು, ಸಾರ್ವಜನಿಕರು, ಅಂಗಡಿ ಮಾಲೀಕರಿಗೆ, ಬೀದಿಬದಿ ವ್ಯಾಪಾರಿಗಳಿಗಾಗಲಿ ತೊಂದರೆಯಾಗುವುದಿಲ್ಲ. ಹೊಸದಾಗಿ ನಿರ್ಮಾಣವಾಗುತ್ತಿರುವ ಶೌಚಾಲಯ ಸೂಕ್ತ ಜಾಗದಲ್ಲಿಲ್ಲ. ಆದ್ದರಿಂದ ಈಗ ಇರುವ ಹಳೆಯ ಶೌಚಾಲಯವನ್ನೇ ನವೀಕರಣ ಮಾಡಬೇಕು. ಅಥವಾ ಅದೇ ಜಾಗದಲ್ಲಿ ಹೊಸದಾಗಿ ನಿರ್ಮಿಸಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಬೆಸ್ಕಾಂ ಕಛೇರಿಗೆ ರೈತ ಸಂಘ ಮುತ್ತಿಗೆ.
“ಹಳೆಯ ಶೌಚಾಲಯ ಸರಿಜಾಗದಲ್ಲಿದೆ. ಇಲ್ಲಿ ಅಂಗಡಿಗಳು, ಹಾಸ್ಪಿಟಲ್ ಗಳಿದ್ದು, ನಗರದ ಬಹಳಷ್ಟು ಜನ, ಹೆಣ್ಣು ಮಕ್ಕಳು ಹಾಗೂ ಮಕ್ಕಳು ಓಡಾಡುವ ಜಾಗ ಇದಾಗಿದೆ. ಈಗ ಇರುವ ಶೌಚಾಲಯ ಜಾಗದಲ್ಲಿ ನವೀಕರಣ ಮಾಡಿ” ಎಂದು ಆಗಾಗ್ಗೆ ಚಳ್ಳಕೆರೆಗೆ ಭೇಟಿ ನೀಡುವ ಪ್ರಯಾಣಿಕ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಸ್ಥಳೀಯ ಪ್ರೆಸ್ ಮಾಲೀಕ ಮುರಳಿ ಮಾತನಾಡಿ, “ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಹಳೆಯ ಶೌಚಾಲಯ ಸರಿಯಾದ ಜಾಗದಲ್ಲಿದೆ. ಅದನ್ನೇ ಸರಿಯಾಗಿ ನಿರ್ವಹಣೆ ಮಾಡದೇ ದುರ್ವಾಸನೆ ಹೊಡೆಯುತ್ತದೆ. ಜನ ಯೋಚಿಸಿ ಬಳಸುವಂತಾಗಿದೆ. ಅಲ್ಲಿ ಹೊಸ ಶೌಚಾಲಯ ಬೇಕೆಂದು ಯಾರು ಬಯಸಿದ್ದಾರೆ. ಯಾರೊಂದಿಗೂ ಸಮಾಲೋಚನೆ ಮಾಡಿಲ್ಲ. ಅಲ್ಲಿ ನೀರು, ನೆರಳಿನ ವ್ಯವಸ್ಥೆ ಮಾಡಿದರೆ ಪ್ರಯಾಣಿಕರಿಗೆ ಸ್ವಲ್ಪ ಉಪಕಾರ ಮಾಡಿದಂತಾಗುತ್ತದೆ. ನಿತ್ಯ ಸಾವಿರಾರು ಜನ ಸಂಚರಿಸುವ ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ. ಹಿಂದೆ ಇರುವ ಅಂಗಡಿ ಮಾಲೀಕರು ಸಾರ್ವಜನಿಕರಲ್ಲವೇ? ಅವರ ಪರಿಸ್ಥಿತಿ ಏನು ಅಂತ ಯೋಚನೆ ಮಾಡಬೇಕು. ಮಾನ್ಯ ಶಾಸಕರು ಭೇಟಿ ನೀಡಿ ಈ ಸಮಸ್ಯೆಗೆ ಪರಿಹಾರ ಕೊಡಿಸಬೇಕು” ಎಂದು ಒತ್ತಾಯಿಸಿದರು.
ಈ ಬಗ್ಗೆ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ನಗರಸಭೆ ಆಯುಕ್ತ ಜಗಾರೆಡ್ಡಿ, “ಈಗಾಗಲೇ ಹಿಂದಿನ ಆಯುಕ್ತರು ಸ್ಥಳ ನಿಗದಿ ಮಾಡಿ, ಹೊಸ ಶೌಚಾಲಯ ನಿರ್ಮಾಣ ಯೋಜನೆಗೆ ಅನುಮೋದನೆ ತೆಗೆದುಕೊಳ್ಳಲಾಗಿದೆ. ಅದರಂತೆ ಈಗ ಕೆಲಸ ಪ್ರಾರಂಭಿಸಲಾಗಿದೆ. ಈ ಬಗ್ಗೆ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಹಳೆಯ ಶೌಚಾಲಯ ಇರುವಾಗ ಮತ್ತೊಂದು ಬದಿಗೆ ಹೊಸ ಶೌಚಾಲಯ ಬೇಕೆ? ಹಳೆಯ ಶೌಚಾಲಯವನ್ನು ನವೀಕರಣ ಮಾಡಬೇಕೇ? ಅಥವಾ ಇರುವ ಶೌಚಾಲಯವನ್ನೇ ಪುನರ್ ನಿರ್ಮಾಣ ಮಾಡಬೇಕೆ? ಎನ್ನುವುದನ್ನು ಜನಪ್ರತಿನಿಧಿಗಳು, ಸಾರ್ವಜನಿಕರು, ಶಾಸಕರು ಮತ್ತು ಅಧಿಕಾರಿಗಳು ಚರ್ಚಿಸಿ ಸೂಕ್ತ ತೀರ್ಮಾನ ಮಾಡಿ ಅನಾವಶ್ಯಕ ಕಟ್ಟಡ ನಿರ್ಮಾಣ, ವೆಚ್ಚಗಳನ್ನು ಕಡಿಮೆ ಮಾಡಿ ಸಾರ್ವಜನಿಕರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿಕೊಡಬೇಕು ಸಾರ್ವಜನಿಕರ ಮನವಿ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು