ಮನೆ -ಮನೆಗೆ “ಬುದ್ಧ, ಬಸವ, ಅಂಬೇಡ್ಕರ್ ” ಅಭಿಯಾನದ 8 ನೇ ಕಾರ್ಯಕ್ರಮವನ್ನು ಸಮಾಜ ಪರಿವರ್ತನಾ ಚಳುವಳಿ ಮೊಳಕಾಲ್ಮೂರು ಇವರ ಆಶ್ರಯದಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಾಜ ಪರಿವರ್ತನ ಚಳುವಳಿಯ ಜಿಲ್ಲಾ ಸಂಯೋಜಕರಾದ ಎಸ್. ಪರಮೇಶ್ ಮಾತನಾಡಿ, “ಸಮಾಜವನ್ನು ನಿರಂತರವಾದ ಪರಿವರ್ತನೆಯೆಡೆಗೆ ಕೊಂಡೊಯ್ಯುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸಮಾಜ ಪರಿವರ್ತನೆಗಾಗಿ ದುಡಿದ ಬುದ್ಧ, ಬಸವ,ಹಾಗೂ ಅಂಬೇಡ್ಕರ್ ರವರ ವಿಚಾರಗಳನ್ನು, ಆಶಯಗಳನ್ನು, ಪ್ರತಿಯೊಬ್ಬರ ಮನೆಗಳಿಗೆ ಮತ್ತು ಮನಸ್ಸುಗಳಿಗೆ ನಾವೆಲ್ಲರೂ ಕೊಂಡಯ್ಯಬೇಕು. ಸಮ ಸಮಾಜ ಕಟ್ಟುವ ಕರ್ತವ್ಯ ನಮ್ಮೆಲ್ಲರದ್ದಾಗಲಿ” ಎಂದು ಆಶಯ ವ್ಯಕ್ತಪಡಿಸಿದರು.

“ಜಗತ್ತಿನ ಮೊದಲ ಜ್ಞಾನಜ್ಯೋತಿ ಭಗವಾನ್ ಬುದ್ದರು ವ್ಯಕ್ತಿಯ ಸ್ವಾತಂತ್ರಕ್ಕೆ ಹಾಗೂ ಸಮಾನತೆಗಾಗಿ ವ್ಯಕ್ತಿಯ ಘನತೆ, ಗೌರವದ ಬದುಕಿಗಾಗಿ ದುಡಿದವರು. ಹಾಗೆಯೇ ಬಸವಣ್ಣನವರು 12 ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸುವುದರ ಮೂಲಕ, ಇವನಾರವ, ಇವನಾರವ ಎನ್ನದಿರಯ್ಯ? ಇವ ನಮ್ಮವ, ಇವ ನಮ್ಮವ ಎಂದೇನಿಸಯ್ಯ! ಮನುಷ್ಯನನ್ನು ಮನುಷ್ಯರನ್ನಾಗಿ ಕಾಣಬೇಕು. ನಾವೆಲ್ಲರೂ ಒಂದೇ ಎನ್ನುವ ಮೂಲಕ 12 ನೇ ಶತಮಾನದಲ್ಲಿ ಸ್ವಾತಂತ್ರ, ಸಮಾನತೆ, ಭ್ರಾತೃತ್ವದ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತಿದರು” ಎಂದು ತಿಳಿಸಿದರು.
“ಬುದ್ಧ, ಬಸವಣ್ಣನವರ ಆಶಯಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರವರು 1950 ಜನವರಿ 26 ರಂದು ಜಾರಿಯಾದ ಸಂವಿಧಾನದಲ್ಲಿ ಭಾರತೀಯರೆಲ್ಲರಿಗೂ ಶಿಕ್ಷಣದ ಹಕ್ಕು, ಉದ್ಯೋಗದ ಹಕ್ಕು, ಮತದಾನದ ಹಕ್ಕು, ಮಹಿಳೆಯರೆಲ್ಲರಿಗೂ ವಿಶೇಷ ಹಕ್ಕುಗಳು, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು, ರಾಜ್ಯನೀತಿ ನಿರ್ದೇಶಕ ತತ್ವಗಳು ನೀಡುವುದರ ಮೂಲಕ ಬುದ್ಧ, ಬಸವಣ್ಣನವರ ಆಶಯಗಳನ್ನು ಕಾನೂನಾಗಿ ರೂಪಿಸಿದರು” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ‘ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ’; ಕ್ರಾಂತಿಕಾರಿ ಪಾದಯಾತ್ರೆ
“ಇಡೀ ಭಾರತದ ಜನರೆಲ್ಲರಿಗೂ ಬುದ್ಧ, ಬಸವಣ್ಣವರ ಆಶಯದಂತೆ ಕಾನೂನಿನ ಮುಂದೆ “ಭಾರತೀಯರೆಲ್ಲರೂ ಸರಿ ಸಮಾನರು” ಎನ್ನುವ ಸಂದೇಶವನ್ನು ನೀಡುವುದರ ಮೂಲಕ ನಾವೆಲ್ಲರೂ ಭಾರತೀಯರು ಎನ್ನುವ ದೇಶಪ್ರೇಮವನ್ನು ತುಂಬಿದರು. ಹಾಗಾಗಿ ನಾವೆಲ್ಲರೂ ಬುದ್ಧ, ಬಸವ, ಅಂಬೇಡ್ಕರ್ ಆಶಯದಂತೆ ಸಮ ಸಮಾಜವನ್ನು ಕಟ್ಟುವ ಕರ್ತವ್ಯ ನಮ್ಮೆಲ್ಲರದ್ದಾಗಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸರ್ಕಾರದ ವಿರುದ್ಧ ಅಣಕು ಶವಯಾತ್ರೆ. ಒಳಮೀಸಲಾತಿ ಹೋರಾಟಗಾರರು, ಪೋಲೀಸರ ಮಧ್ಯೆ ವಾಗ್ವಾದ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪರಿವರ್ತನಾ ಚಳಿವಳಿಯ ಗೌರವ ಅಧ್ಯಕ್ಷರಾದ ಎಂ. ರುದ್ರಯ್ಯ, ಜಿಲ್ಲಾ ಅಧ್ಯಕ್ಷರಾದ ನಾಗಸಮುದ್ರ ಮರಿಸ್ವಾಮಿ, ಸಮಾಜ ಪರಿವರ್ತನ ಚಳುವಳಿಯ ತಾಲ್ಲೂಕು ಸಂಯೋಜಕರಾದ ತಮ್ಮನಹಳ್ಳಿ ತಿಪ್ಪೇಸ್ವಾಮಿ, ಮುಖಂಡರಾದ ನುಂಕೇಶ್, ಅನಿಲ್ ಕುಮಾರ್, ಯಶವಂತ, ಆಯೋಜಕರಾದ ಮಾಚೇನಹಳ್ಳಿ ಲೋಕೇಶ್, ಮಲ್ಲಿಕಾರ್ಜುನ, ಪರಮೇಶ್ವರಪ್ಪ, ತರುಣ್, ಪರಮೇಶ್ ಮೊದಲಾದವರು .
ಭಾಗವಹಿಸಿದ್ದರು.