ಅಡಿಕೆ ಶೆಡ್ ನಿರ್ಮಾಣದ ವೇಳೆ ಕಬ್ಬಿಣದ ತುಂಡಿಗೆ ಸ್ಥಳದ ಪಕ್ಕದಲ್ಲೇ ಹಾದುಹೋಗಿದ್ದ ವಿದ್ಯುತ್ ತಂತಿ ತಗುಲಿ ಶೆಡ್ ನಿರ್ಮಾಣದ ವೇಳೆ ಮಾಲೀಕ, ಕಾರ್ಮಿಕರಿಬ್ಬರೂ ಸೇರಿ ಅಸ್ವಸ್ಥಗೊಂಡಿದ್ದ ಮೂವರು ಸಾವನ್ನಪ್ಪಿರುವ ಅವಘಡ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕಾಳಘಟ್ಟದಲ್ಲಿ ನಡೆದಿದೆ.
ಮೂಲತಃ ಹೊಳಲ್ಕೆರೆ ತಾಲೂಕಿನ ಗ್ಯಾರೇಹಳ್ಳಿಯ ನಿವಾಸಿಯಾದ ಶ್ರೀನಿವಾಸ್ (35), ದಾವಣಗೆರೆ ಮೂಲದ ಕಾರ್ಮಿಕ ನಜೀರ್ (30), ಫಾರೂಕ್ (30) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
“ಕಾಳಗಟ್ಟದಿಂದ ಸುಮಾರು ಹತ್ತು ಕಿಲೋಮೀಟರ್ ದೂರದ ಗ್ಯಾರೇಹಳ್ಳಿಯವರಾದ ಶ್ರೀನಿವಾಸರ ತಂದೆ ಕಾಳಗಟ್ಟದಲ್ಲಿ ಜಮೀನು ಹೊಂದಿದ್ದರು. ಕೃಷಿ, ಅಡಿಕೆ ಕೆಲಸಕ್ಕೆ ಸ್ಥಳ ಇಲ್ಲದೆ ಹಿನ್ನೆಲೆಯಲ್ಲಿ ಕಾಳಗಟ್ಟ ಗ್ರಾಮದಲ್ಲಿ ಶೆಡ್ ನಿರ್ಮಾಣಕ್ಕೆ ಮುಂದಾಗಿದ್ದರು. ಸ್ಥಳದ ಹತ್ತಿರದಲ್ಲೇ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯ ತಂತಿ ಹಾದುಹೋಗಿದ್ದು, ತೋಟದಲ್ಲಿ ಅಡಕೆ ಶೇಡ್ ನಿರ್ಮಾಣ ವೇಳೆ ಈ ದುರಂತ ಸಂಭವಿಸಿದೆ” ಎಂದು ಗ್ರಾಮದ ಯುವಕ ಕರಿಯಪ್ಪ ಮಾಹಿತಿ ನೀಡಿದ್ದಾರೆ.
ಕಬ್ಬಿಣದ ಕಂಬ ನೆಡುವ ವೇಳೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದ್ದು, ತಕ್ಷಣವೇ ತೀವ್ರ ಅಸ್ವಸ್ಥಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಯೂರಿಯಾ ರಸಗೊಬ್ಬರ ಅಭಾವ; ರೈತರ ಬೆಳೆಗಳಿಗೆ ಅಗತ್ಯ ಗೊಬ್ಬರ ಒದಗಿಸಲು ರೈತ ಸಂಘ ಆಗ್ರಹ
“ಕಾಳಗಟ್ಟ ಗ್ರಾಮದ ವಿದ್ಯುತ್ ಅವಘಡಕ್ಕೆ ತುತ್ತಾಗಿ ಅಸ್ವಸ್ಥಗೊಂಡಿದ್ದ ಮೂವರು ಮೃತಪಟ್ಟಿದ್ದಾರೆ. ಇದಕ್ಕೆ ಸಂಭಂದಿಸಿದಂತೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ. ತನಿಖೆ ನಡೆಸಲಾಗುತ್ತಿದೆ” ಎಂದು ಚಿಕ್ಕಜಾಜೂರು ಠಾಣೆಯ ಉಪನಿರೀಕ್ಷಕರಾದ ನೇತ್ರಾವತಿ ದೃಢಪಡಿಸಿದ್ದಾರೆ.