ಮಂಗಳವಾರ ರಾಜ್ಯಾದ್ಯಂತ ಪದವಿಪೂರ್ವ ಶಿಕ್ಷಣದ (ಪಿಯುಸಿ) ಫಲಿತಾಂಶ ಪ್ರಕಟವಾಗಿದ್ದು, ವಿಧ್ಯಾರ್ಥಿಗಳು ಫಲಿತಾಂಶದ ಸಂಭ್ರಮದಲ್ಲಿದ್ದರೆ, ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿದ್ದಕ್ಕೆ ಬೇಸತ್ತು ದಾವಣಗೆರೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕು ಕುಡಿನೀರಕಟ್ಟೆ ಗ್ರಾಮದ ‘ಕೃಪಾ’ ಮೃತ ವಿದ್ಯಾರ್ಥಿನಿಯಾಗಿದ್ದು, ದಾವಣಗೆರೆ ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದರು. ಪಿಯುಸಿ ವಿಜ್ಞಾನ ವಿಭಾಗದ ಎರಡು ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಆಘಾತಕಾರಿ ಸಂಗತಿ | ದ್ವಿತೀಯ ಪಿಯುಸಿಯಲ್ಲಿ ಫೇಲ್; ಐವರು ವಿದ್ಯಾರ್ಥಿಗಳು ಆತ್ಮಹತ್ಯೆ
ಕುಡಿನೀರಕಟ್ಟೆಯ ಚಂದ್ರಶೇಖರಪ್ಪ ಹಾಗೂ ವೀಣಾ ದಂಪತಿಗಳಿಗೆ ಕೃಪಾ ಒಬ್ಬಳೇ ಮಗಳಿದ್ದಳು. ಒಬ್ಬಳೇ ಮಗಳ ಸಾವಿನಿಂದ ಕಂಗಾಲಾಗಿರುವ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಹೊಳಲ್ಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೆರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.