ತಳಕು ವಿದ್ಯುತ್ ವಿತರಣಾ ಕೇಂದ್ರದಿಂದ ಸಮರ್ಪಕವಾದ ವಿದ್ಯುತ್ ಸರಬರಾಜು ಮಾಡದೆ ಬೆಳೆಗಳು ಒಣಗುತ್ತಿದ್ದು ಇದರಿಂದ ಕಂಗೆಟ್ಟ ನೂರಾರು ರೈತರು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ತಳುಕು ಬೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಬೀಗ ಹಾಕಲು ಮುಂದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ ಮಾತನಾಡಿ, “ತಳಕು ಭಾಗದಲ್ಲಿ ನಿರಂತರವಾಗಿ ಹಗಲು ಹೊತ್ತಿನಲ್ಲೇ ಗ್ರಾಮಗಳಲ್ಲಿ ವಿದ್ಯುತ್ ಪೋಲಾಗುತ್ತಿದೆ. ಇದನ್ನು ಸರಿಪಡಿಸಬೇಕಾಗಿದ್ದ ವಿದ್ಯುತ್ ಇಲಾಖೆ ಕಂಡು ಕಾಣದಂತೆ ಮಲಗಿದೆ. ಸಮಸ್ಯೆಗಳನ್ನು ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ರೈತರ ಜಮೀನು, ಬೋರ್ವೆಲ್ಗಳಿಗೆ ಸರಿಯಾದ ವಿದ್ಯುತ್ ನೀಡದ ಕಾರಣ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ಈ ಕೂಡಲೇ ಸಮರ್ಪಕವಾಗಿ ವಿದ್ಯುತ್ ಪೂರೈಸಿ, ರೈತರಿಗೆ ಪರಿಹಾರ ದೊರಕಿಸಿಕೊಡಬೇಕು” ಎಂದು ಒತ್ತಾಯಿಸಿದರು.

ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ, “ಈಗಾಗಲೇ ತಳಕು ವಿತರಣಾ ಕೇಂದ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಸಮರ್ಪಕವಾದ ವಿದ್ಯುತ್ ನೀಡದ ಕಾರಣ ರೈತರು ನೊಂದು, ರೋಸಿ ಹೋಗಿದ್ದಾರೆ. ಬೆಳೆಗಳು ಒಣಗುತ್ತಿವೆ. ದನಕರುಗಳ ಕುಡಿಯುವ ನೀರಿಗೆ ಸಹ ತೊಂದರೆಯಾಗಿದೆ. ಇದರಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ವಿದ್ಯುತ್ ಪೂರೈಕೆಗೆ ಒತ್ತಾಯಿಸಿದ್ದೇವೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ರೈತರ ಜಮೀನುಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಅಧಿಕಾರಿಗಳು ಸಹ ಹೊರಹೋಗದೆ ನಮಗೆ ನ್ಯಾಯ ಕೊಡಬೇಕು. ಅಲ್ಲಿಯವರೆಗೆ ಮುತ್ತಿಗೆ ಹಾಕಿ ರೈತರು ಇಲ್ಲೇ ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡ ಮರ್ಲಹಳ್ಳಿ ರವಿಕುಮಾರ್ ಮಾತನಾಡಿ, “ವಿದ್ಯುತ್ ಕಣ್ಣ ಮುಚ್ಚಾಲೆ ಆಟದಲ್ಲಿ ರೈತರ ಬೆಳೆಗಳು ಸಂಪೂರ್ಣ ಒಣಗಿವೆ. ಸಾಲ ಮಾಡಿ, ಬೀಜ ತಂದು ಬೆಳೆ ಬೆಳೆದು ಫಸಲಿಗೆ ಬಂದ ಬೆಳೆಗಳು ಒಣಗಿದ್ದು, ರೈತರು ವಿಷ ಕುಡಿಯುವಂತಾಗಿದೆ. ವಿದ್ಯುತ್ ಸರಿಯಾಗಿ ಇರದೇ ಕಣ್ಣಾಮುಚ್ಚಾಲೆಯಾಡುತ್ತಿದೆ. ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ರೈತರ ಪಂಪ್ಸೆಟ್ಟುಗಳಿಗೆ ಸಮರ್ಪಕ ವಿದ್ಯುತ್ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರಿಸರ್ವ್ ಬ್ಯಾಂಕ್, ಲೀಡ್ ಬ್ಯಾಂಕ್ ನಿಯಮ ಉಲ್ಲಂಘನೆ; ಅಧಿಕಾರಿಗಳ ಅಮಾನತಿಗೆ ರೈತ ಸಂಘ ಆಗ್ರಹ
ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷರಾದ ಶ್ರೀಕಂಠಮೂರ್ತಿ, ಗೌರವಾಧ್ಯಕ್ಷರಾದ ಚನ್ನಕೇಶವಮೂರ್ತಿ, ನಾಗೇಂದ್ರಪ್ಪ, ಆಶ್ವತ್ ರೆಡ್ಡಿ, ರುದ್ರಪ್ಪ, ಹನುಮಂತರೆಡ್ಡಿ ಮತ್ತು ವಲಸೆ, ತಿಮ್ಮನಹಳ್ಳಿ ತಾಂಡ, ತಿಮ್ಮನಹಳ್ಳಿ, ಚಿಕ್ಕಹಳ್ಳಿ, ಬೇಡರೆಡ್ಡಿಹಳ್ಳಿ, ಗುಡ್ಡದ ಕಪಿಲೆ, ತಳಕು, ಬಂಜಗೆರೆ ಸೇರಿದಂತೆ ಹಲವು ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.
