ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣ ಕೂಲಿಕಾರರ ಸಂಘಟನೆ-ಗ್ರಾಕೂಸ್ ಕಾರ್ಯಕರ್ತರು ಚಿತ್ರದುರ್ಗ ನಗರದ ಡಿಸಿ ಕಚೇರಿ ಮುಂಭಾಗದ ಒನಕೆ ಓಬವ್ವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿತು.
‘ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸರಿಯಾಗಿ ಕೂಲಿ ಕಾರ್ಮಿಕರಿಗೆ ನರೇಗಾ ಉದ್ಯೋಗ ನೀಡಿರುವುದಿಲ್ಲ. ಕೆಲವೆಡೆ ಕೇವಲ ಒಂದು ವಾರ ಕೆಲಸ ಕೊಡಿ ಕೊಟ್ಟು ಜಾಬ್ ಕಾರ್ಡ್ಗಳಲ್ಲಿ ಉದ್ಯೋಗ ಅವಧಿ ಮುಗಿದಿದೆ ಎಂದು ತಿಳಿಸುತ್ತಾರೆ. ಯಂತ್ರಗಳಲ್ಲಿ ಕೆಲಸ ಮಾಡುತ್ತಿದ್ದು ನೈಜಕೂಲಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ’ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ಚಳ್ಳಕೆರೆ ತಾಲೂಕಿನ ಗ್ರಾಕೂಸ್ ಸಂಘಟನೆಯ ಓಬಯ್ಯ “ದೊಡ್ಡೇರಿ, ಪರಶುರಾಂಪುರ, ಜಾಜೂರು ಗ್ರಾಮ ಪಂಚಾಯಿತಿಗಳಲ್ಲಿ ಸರಿಯಾಗಿ ಉದ್ಯೋಗ ನೀಡುತ್ತಿಲ್ಲ. ಪಿಡಿಒಗಳು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸೇರಿಕೊಂಡು ಕೂಲಿ ಕಾರ್ಮಿಕರಿಗೆ ಉದ್ಯೋಗ ನಿರಾಕರಿಸುತ್ತಿದ್ದಾರೆ. ಕೆಲವೆಡೆ ಯಂತ್ರಗಳಲ್ಲಿ ಕೆಲಸಗಳಾಗುತ್ತಿದೆ. ಮೇಲಾಧಿಕಾರಿಗಳು ಗಮನಹರಿಸಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಿಸಬೇಕು” ಎಂದು ಒತ್ತಾಯಿಸಿದರು.
ಚಳ್ಳಕೆರೆ ತಾಲೂಕಿನ ಗ್ರಾಕೂಸ್ ಸಂಘಟನೆಯ ಮಂಜಮ್ಮ ಮಾತನಾಡಿ,”ನರೇಗಾ ಪ್ರಕಾರ ಒಂದು ಕುಟುಂಬಕ್ಕೆ ನೂರು ದಿನಗಳ ಉದ್ಯೋಗ ಅವಧಿ ದೊರಕಬೇಕು. ಆದರೆ ಅದು ನಮ್ಮ ತಾಲೂಕಿನಲ್ಲಿ ಸರಿಯಾಗಿ ಜಾರಿಯಾಗುತ್ತಿಲ್ಲ. ಅತಿ ಹೆಚ್ಚು ಮಾನವ ದಿನಗಳು ಅಲ್ಲಿ ಯಂತ್ರಗಳಿಂದ ಕೆಲಸ ಮಾಡುತ್ತಿರುವ ಜನಪ್ರತಿನಿಧಿಗಳಿಗೆ ಸಿಗುತ್ತಿದೆ. ಅದರಿಂದಲೇ ಜೀವನ ಮಾಡುವ ನೈಜ ಕೂಲಿ ಕಾರ್ಮಿಕರಿಗೆ ಉದ್ಯೋಗ ಕೊಡದೆ ವಂಚಿಸಲಾಗುತ್ತಿದೆ. ಮತ್ತು ಕೊಟ್ಟಿರುವ ಅಲ್ಪ ಸ್ವಲ್ಪ ಕೆಲಸಕ್ಕೂ ಸರಿಯಾದ ಸಮಯಕ್ಕೆ ಕೂಲಿ ಪಾವತಿಸದೆ ತಿಂಗಳಗಟ್ಟಲೆ ಅಲೆದಾಡಿಸಿ ವಂಚಿಸಲಾಗುತ್ತಿದೆ” ಎಂದು ಆರೋಪಿಸಿದರು.

ಪ್ರತಿಭಟನೆಯ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ತಿಮ್ಮಣ್ಣ, “ನರೇಗಾ ಪ್ರಕಾರ ಅಲ್ಲಿನ ಕೂಲಿಕಾರ್ಮಿಕರಿಗೆ ನೂರು ದಿನಗಳ ಉದ್ಯೋಗ ನೀಡಬೇಕು. ಸಂಘಟನೆಯವರು ನೀಡಿರುವ ಮನವಿ ಪ್ರಕಾರ ಆಯಾ ತಾಲೂಕಿನ ಗ್ರಾಮ ಪಂಚಾಯಿತಿ ಪಿಡಿಒಗಳು ಮತ್ತು ಎಡಿಗಳ ತುರ್ತು ಸಭೆಯನ್ನು ಶುಕ್ರವಾರ ಕರೆಯುತ್ತಿದ್ದೇನೆ. ಸಂಘಟನೆಯ ಕಾರ್ಮಿಕರನ್ನು ಎದುರಿಗೆ ಕೂರಿಸಿಕೊಂಡು ಸಮಸ್ಯೆ ಇರುವ ಪಂಚಾಯತಿಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಕೂಡಲೇ ನರೇಗಾ ಉದ್ಯೋಗ ನೀಡುವಂತೆ ಕ್ರಮ ಕೈಗೊಳ್ಳುತ್ತೇನೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸಿ: ಯುಎಫ್‌ಬಿಯು-ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಆಗ್ರಹ.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಮಲ್ಲೇಶ್, ಚಿತ್ರದುರ್ಗ ತಾಲೂಕು ಸಂಚಾಲಕಿ ತೇಜೇಶ್ವರಿ, ಭಾರತಿ, ಕರಿಯಮ್ಮ, ಚಿದಾನಂದ, ಆನಂದ, ಚೆನ್ನಮ್ಮ, ನಾಗರಾಜ, ಶಿವಮ್ಮ, ಚಿತ್ತಮ್ಮ, ನೇತ್ರಾವತಿ, ರಾಮಪ್ಪ, ಕವಿತಾ, ಗೀತಮ್ಮ, ಭಾಗ್ಯಮ್ಮ, ವಿನೋದಮ್ಮ ಸೇರಿದಂತೆ ಹಲವಾರು ಗ್ರಾಕೂಸ್ ಕಾರ್ಯಕರ್ತರು ಭಾಗವಹಿಸಿದ್ದರು.