ಕನ್ನಡ ವಿಶ್ವವಿದ್ಯಾಲಯ, ಹಂಪಿಯ 33ನೇ ನುಡಿಹಬ್ಬದ ಘಟಿಕೋತ್ಸವದಲ್ಲಿ ಚಿತ್ರದುರ್ಗ ಜಿಲ್ಲೆ ಮತ್ತು ತಾಲೂಕಿನ ಹಿರೇಕಬ್ಬಿಗೆರೆ ಗ್ರಾಮೀಣ ಪ್ರತಿಭಾವಂತ ಯುವಕ ಸೈಯದ್ ಬಿ. ಅವರ “ಕನ್ನಡಾನುವಾದಿತ ಉರ್ದು ಕಥನ ಸಾಹಿತ್ಯದಲ್ಲಿ ಸಾಮಾಜಿಕ ಸಂವೇದನೆ” ಎಂಬ ಸಂಶೋಧನಾ ಪ್ರಬಂಧಕ್ಕೆ ಫೆಲೋ ಶಿಪ್ ದೊರೆತಿದ್ದು, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರು ಪಿಎಚ್.ಡಿ. ಪದವಿ ಪ್ರಧಾನ ಮಾಡಿದರು.

ಚಿತ್ರದುರ್ಗ ತಾಲೂಕಿನ ಹಿರೇಕಬ್ಬಿಗೆರೆ ಗ್ರಾಮದ ರೈತಾಪಿ ಕುಟುಂಬದ ಬಾಬುಸಾಬ್, ದಿಲ್ ಶಾದ್ ದಂಪತಿಗಳ ಮಗ ಸೈಯದ್ ಬಿ ಅವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ., ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರ ಚೊಚ್ಚಲ ವಿಮರ್ಶಾ ಕೃತಿ ‘ಬಯಲು’ ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದಿಂದ 2020ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಯಾಗಿ ಧನ ಸಹಾಯ ಪಡೆದಿದೆ.
‘ಆಧುನಿಕ ಕನ್ನಡ ಸಾಹಿತ್ಯ’ ಎಂಬ ಸಂಪಾದಿತ ಕೃತಿಯನ್ನು ಪ್ರಕಟಿಸಿದ್ದು, 13 ವಿಮರ್ಶೆ, ಸಂಶೋಧನಾ ಲೇಖನಗಳು ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯು.ಜಿ.ಸಿ ಜೂನಿಯರ್ ಮತ್ತು ಸೀನಿಯರ್ ಫೆಲೋ ಆಗಿ ಪಿಎಚ್.ಡಿ. ಅಧ್ಯಯನವನ್ನು ಇದೇ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ವಿಠಲರಾವ್ ಟಿ. ಗಾಯಕ್ವಾಡ್ ಅವರ ಮಾರ್ಗದರ್ಶನದಲ್ಲಿ ‘ಕನ್ನಡಾನುವಾದಿತ ಉರ್ದು ಕಥನ ಸಾಹಿತ್ಯದಲ್ಲಿ ಸಾಮಾಜಿಕ ಸಂವೇದನೆ’ ಎಂಬ ಮಹಾ ಪ್ರಬಂಧವನ್ನು ಸಿದ್ಧಪಡಿಸಿ ವಿವಿಗೆ ಸಲ್ಲಿಸಿದ್ದರು.
ಗ್ರಾಮೀಣ ಪ್ರತಿಭೆಯಾದ ಇವರಿಗೆ ಕುಟುಂಬ, ಸ್ನೇಹಿತರು, ಗ್ರಾಮಸ್ಥರು ಹಾಗೂ ಹಲವು ಗಣ್ಯಮಾನ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ.