ಕರ್ನಾಟಕ ಪೊಲೀಸ್ ದೇಶದಲ್ಲಿಯೇ ಅತ್ಯುತ್ತಮ ಹಾಗೂ ಆಧುನಿಕವಾದ ಸೌಲಭ್ಯಗಳನ್ನು ಹೊಂದಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಚಿತ್ರದುರ್ಗ ನಗರದ ಬಸವೇಶ್ವರ ನಗರದ ಪೊಲೀಸ್ ವಸತಿ ಗೃಹದಲ್ಲಿ ರಾಜ್ಯ ಪೊಲೀಸ್, ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ಜಿಲ್ಲೆಯ ಪೊಲೀಸ್ ಸಮುಚ್ಛಯ ಮತ್ತು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ, ತಳಕು ಪೊಲೀಸ್ ಠಾಣೆಗಳ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
“ಇತ್ತೀಚೆಗೆ ನಿರ್ಮಾಣ ಮಾಡಲಾಗಿರುವ ಕೆಲವು ಪೊಲೀಸ್ ಸ್ಟೇಷನ್‌ಗಳನ್ನು ಐಟಿ ಕಂಪನಿಗಳ ರೀತಿಯಲ್ಲಿ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗಿದೆ. ತಂತ್ರಜ್ಞಾನದ ಸಹಾಯದಿಂದ ಪ್ರಸ್ತುತ ದಿನಗಳಲ್ಲಿ ಪೊಲೀಸರು ಅಪರಾಧಿಗಳನ್ನು ಶೀಘ್ರವೇ ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಪ್ರಕರಣಗಳನ್ನು ತ್ವರಿತಗತಿಯಲ್ಲಿ ಭೇದಿಸುವಲ್ಲಿ ಸನ್ನದ್ಧರಾಗಿದ್ದಾರೆ” ಎಂದರು.
“ಪೊಲೀಸ್ ಗೃಹ 2025 ಕಾರ್ಯಕ್ರಮದಲ್ಲಿ ಇನ್ನೂ 10 ಸಾವಿರ ಮನೆ ನಿರ್ಮಾಣ ಮಾಡುವ ಗುರಿ ಇದೆ. ಪೊಲೀಸ್ ವಸತಿ ನಿಗಮದಲ್ಲಿ ₹600 ಕೋಟಿ ಅನುದಾನವಿದ್ದು, ಹೆಚ್ಚಿನ ರೀತಿಯಲ್ಲಿ ಸುಂದರವಾದ ಪೊಲೀಸ್ ಸಮುಚ್ಛಯ ನಿರ್ಮಾಣ ಮಾಡಲಾಗುವುದು” ಎಂದರು.
“ದೇಶದ ಕಾನೂನು ವ್ಯವಸ್ಥೆ ರಕ್ಷಣೆ ಮಾಡಬೇಕಾದರೆ ಅದು ಪೊಲೀಸ್ ಅವರಿಂದ ಮಾತ್ರ ಸಾಧ್ಯ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆಯಾಗಿದೆ. ಕಾನೂನು ರಕ್ಷಣೆ ಮಾಡುವ ಅಧಿಕಾರ ಪೊಲೀಸ್ ಇಲಾಖೆಗೆ ನೀಡಲಾಗಿದೆ. ಹಾಗಾಗಿ ಪೊಲೀಸರನ್ನು ನಾವು ಸರಿಯಾಗಿ ನೋಡಿಕೊಳ್ಳುವ ಅಗತ್ಯ ಬಹಳಷ್ಟಿದೆ” ಎಂದು ಹೇಳಿದರು.
“ಪೊಲೀಸ್ ಇಲಾಖೆಯಲ್ಲಿ 1.10 ಲಕ್ಷ ಸಿಬ್ಬಂದಿ ಇದ್ದು, ಇದರಲ್ಲಿ ಕನಿಷ್ಟ 70 ರಿಂದ 80 ಸಾವಿರ ಸಿಬ್ಬಂದಿಗೆ ಪೊಲೀಸ್ ವಸತಿ ಸಮುಚ್ಛಯ ನಿರ್ಮಾಣ ಮಾಡಿಕೊಡಬೇಕು ಎಂಬ ಸಂಕಲ್ಪ ಹೊಂದಿದ್ದು, ಒಂದು ಯೋಜನೆಯನ್ನಾಗಿ ಮಾಡಿ ವಸತಿ ಸಮುಚ್ಛಯ ನಿರ್ಮಾಣ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಿಕೊಡಲಾಗುವುದು. ನಾನು ಮೂರನೇ ಬಾರಿಗೆ ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿದ್ದು, ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ಮಾಡುವ ನಿಟ್ಟಿನಲ್ಲಿ “ಪೊಲೀಸ್ ಗೃಹ” ಯೋಜನೆಯನ್ನು ಮಾಡಿ 10 ಸಾವಿರ ಮನೆಗಳನ್ನು ಕಟ್ಟಲಾಗುತ್ತಿದೆ. ಪೊಲೀಸ್ ಕುಟುಂಬಕ್ಕೆ ಅನಿಲ ಸಂಪರ್ಕ, ತ್ಯಾಜ್ಯ ವಿಲೇವಾರಿ, ಆಧುನಿಕ ಮಾದರಿಯ ಕಿಚನ್ ಸೇರಿದಂತೆ ನವೀನ ಮಾದರಿಗೆ ಅನುಗುಣವಾಗಿ ಅತ್ಯುತ್ತಮ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಾರಂಭದಲ್ಲಿ ಒಂದು ಘಟಕ ವೆಚ್ಚಕ್ಕೆ ರೂ.16 ಲಕ್ಷ ಇತ್ತು. ಇದೀಗ ರೂ.20 ಲಕ್ಷಕ್ಕೆ ಏರಿಕೆಯಾಗಿದೆ. ಬಹಳ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಪೊಲೀಸ್ ಸಮುಚ್ಛಯದಲ್ಲಿ ಪೊಲೀಸ್ ಸಿಬ್ಬಂದಿಗೆ ಅಗತ್ಯವಾದ ಉತ್ತಮ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ಪೊಲೀಸ್ ಸಿಬ್ಬಂದಿಗೆ ಉತ್ತಮ ಸೌಲಭ್ಯ ಒದಗಿಸಿದರೆ ಒಳ್ಳೆಯ ಕೆಲಸ ನಿರ್ವಹಿಸುತ್ತಾರೆ” ಎಂದು ಹೇಳಿದರು.
“ನಮ್ಮ ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್, ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ ಮುಂತಾದ ಯೋಜನೆಗಳು ರೈತರಿಗೆ ತಲುಪುವಂತಹ ಯೋಜನೆಯಾಗಿವೆ. ಜನರ ಹಣ ಜನರಿಗೆ ಕೊಡುತ್ತಿದ್ದೇವೆ. ಹೀಗಾಗಿ ಇದು ಸರ್ಕಾರಕ್ಕೆ ನಷ್ಟ ಎಂದು ಪರಿಗಣಿಸುವುದು ಸರಿಯಲ್ಲ” ಎಂದು ಗೃಹ ಸಚಿವರು ಹೇಳಿದರು.
ಯೋಜನಾ ಮತ್ತು ಸಾಂಖ್ಯಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮಾತನಾಡಿ, “ಚಿತ್ರದುರ್ಗ ಹಾಗೂ ಹಿರಿಯೂರು ನಗರಕ್ಕೆ ಪೊಲೀಸ್ ವಸತಿ ಸಮುಚ್ಛಯ ಹಾಗೂ ಚಳ್ಳಕೆರೆ, ಹಿರಿಯೂರು ನಗರಕ್ಕೆ ಸಂಚಾರಿ ಪೊಲೀಸ್ ಠಾಣೆ ಅಗತ್ಯವಾಗಿ ಬೇಕಾಗಿದೆ. ಇದರ ಜೊತೆಗೆ ಹೊಸದುರ್ಗದಲ್ಲಿ ಹೆಚ್ಚುವರಿ ಪೊಲೀಸ್ ಠಾಣೆ, ಚಿಕ್ಕಜಾಜೂರಿನಲ್ಲಿ ಪೊಲೀಸ್ ಠಾಣೆ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಆಡಳಿತ ಸುಗಮವಾಗಲು ಅನುಕೂಲವಾಗಲಿದೆ” ಎಂದು ಗೃಹ ಸಚಿವರಿಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕೆಲಸ ಮಾಡದ ಅಧಿಕಾರಿಗಳನ್ನು ಎಚ್ಚರಿಸಲು ನಿದ್ದೆ ಚಳುವಳಿ ಹಮ್ಮಿಕೊಂಡ ರೈತರು
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಕೆ ಸಿ ವೀರೇಂದ್ರ ಪಪ್ಪಿ, ಟಿ ರಘುಮೂರ್ತಿ, ಬಿ ಜಿ ಗೋವಿಂದಪ್ಪ, ದಾವಣಗೆರೆ ಪೂರ್ವ ವಲಯದ ಉಪ ಪೊಲೀಸ್ ಮಹಾ ನಿರೀಕ್ಷಕ ಡಾ ಕೆ ತ್ಯಾಗರಾಜ್, ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಜೆ ಸೋಮಶೇಖರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಧರ್ಮೇಂದ್ರ ಕುಮಾರ್ ಮೀನಾ, ಮಾಜಿ ಸಚಿವ ಹೆಚ್ ಆಂಜನೇಯ, ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಸೇರಿದಂತೆ ಇತರರು ಇದ್ದರು.