“ಸಮಾಜವು ಪರಸ್ಪರ ಪ್ರೀತಿಯನ್ನು ಬಯಸುತ್ತದೆ. ಸಹಬಾಳ್ವೆ ಸಹಜೀವನವನ್ನು ಕಲಿಸುತ್ತದೆ. ಹಾಗಾಗಿ ಮನುಷ್ಯರು ಸಮಾಜವನ್ನು ಪ್ರೀತಿಸುವುದನ್ನು ಕಲಿತಾಗ ಸಮಾಜವು ನಮ್ಮನ್ನು ಪ್ರೀತಿಸುತ್ತದೆ. ಸಹಬಾಳ್ವೆ, ಸಮಾಜ ಪರಿವರ್ತನೆ ನಮ್ಮ ಧ್ಯೇಯವಾಗಲಿ” ಎಂದು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಹಾನಗಲ್ ನಲ್ಲಿ ನಿವೃತ್ತ ಖಜಾನೆ ಅಧಿಕಾರಿಗಳಾದ ಭಂಗಿ ನಾಗರಾಜ್ ಅಭಿಪ್ರಾಯಪಟ್ಟರು.
ಸಮಾಜ ಪರಿವರ್ತನಾ ವೇದಿಕೆಯ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹಾನಗಲ್ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪದಾಧಿಕಾರಿಗಳ ಆಯ್ಕೆಯ ಮಹತ್ವದ ಸಭೆಯನ್ನು ಉದ್ಘಾಟಿಸಿದ ನಿವೃತ್ತ ಖಜಾನೆ ಅಧಿಕಾರಿ ಭಂಗಿ ನಾಗರಾಜ್ ಮಾತನಾಡಿ, “ಪ್ರೀತಿ ಇಲ್ಲದ ಯಾವುದೇ ಸೇವೆಯು ವ್ಯರ್ಥವಾಗುತ್ತದೆ. ಸಮಾಜದ ಪರಿವರ್ತನೆಯನ್ನು ಬಯಸುವ ನಾವುಗಳು ಪರಿವರ್ತನೆಗಾಗಿ ದುಡಿದ ಮಹಾನ್ ದಾರ್ಶನಿಕರಾದ ಬುದ್ಧ, ಜಗಜ್ಯೋತಿ ಬಸವಣ್ಣ, ಮಹಾತ್ಮ ಜ್ಯೋತಿ ಭಾಪುಲೆ, ಪೆರಿಯಾರ್, ಬಾಬಾ ಸಾಹೇಬ್ ಅಂಬೇಡ್ಕರ್ ಮೊದಲಾದವರು ಮಾನವೀಯ ಮೌಲ್ಯಗಳ ಸಾಕಾರಕ್ಕಾಗಿ ಮಾನವನ ಸರ್ವತೋಮುಖ, ಅಭಿವೃದ್ಧಿಗಾಗಿ ದುಡಿದವರು. ಇವರೆಲ್ಲರ ಬದುಕಿನ ಪ್ರತಿಫಲವಾಗಿ ನಾವು ಸಂವಿಧಾನಾತ್ಮಕವಾಗಿ ಸಕಲ ಸೌಲಭ್ಯಗಳನ್ನು ಪಡೆದುಕೊಂಡು ನೆಮ್ಮದಿಯಿಂದ ಜೀವಿಸುತ್ತಿದ್ದೇವೆ” ಎಂದು ಅಭಿಪ್ರಾಯಪಟ್ಟರು.

“ಸಂವಿಧಾನಾತ್ಮಕವಾಗಿ ಘನತೆಯ ಬದುಕನ್ನು ಕಟ್ಟಿಕೊಂಡ ನೌಕರರು, ಸಮಾಜಮುಖಿಯಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಮರಳಿ ಸಮಾಜಕ್ಕೆ ಹಿಂತಿರುಗಿ, ಮರಳಿ ಸಮಾಜಕ್ಕೆ ನೀಡಿ ಎನ್ನುವ ದಿವ್ಯ ಸಂದೇಶದ ಸಾಕ್ಷಾತ್ಕಾರವನ್ನು ಸಮಾಜ ಪರಿವರ್ತನೆಗಾಗಿ ನಾವೆಲ್ಲರೂ ಸಲ್ಲಿಸಬೇಕು. ಇಂದಿಗೂ ಹಳ್ಳಿಗಳಲ್ಲಿ ತಾಂಡವಾಡುತ್ತಿರುವ ಅನಿಷ್ಟ ಪದ್ದತಿಗಳಾದ ಜಾತಿ ಪದ್ಧತಿ, ಜೀತಪದ್ಧತಿ, ಬಾಲ್ಯ ವಿವಾಹ, ವರದಕ್ಷಿಣೆ, ದೇವದಾಸಿ ಪದ್ಧತಿ, ಮೂಢನಂಬಿಕೆ ಮೊದಲಾದವುಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಇಂತಹ ಕೆಲಸಕ್ಕೆ ಕೈಹಾಕಿ ಜಾಗೃತಿ ಮೂಡಿಸುತ್ತಿರುವ ಯುವಕರಿಗೆ ನೌಕರರಿಗೆ ಸಮಾಜ ಪರಿವರ್ತನೆಯೇ ನಮ್ಮ ಧ್ಯೇಯವಾಗಬೇಕು” ಎಂದು ಸಲಹೆ ನೀಡಿದರು…
ಸಮಾಜ ಪರಿವರ್ತನಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಎಂ ರುದ್ರಯ್ಯ ಮಾತನಾಡಿ “ಪರಿವರ್ತನಾ ವೇದಿಕೆಯು ಕಳೆದ ಐದಾರು ವರ್ಷಗಳಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮೊಳಕಾಲ್ಮೂರು ತಾಲೂಕಿನಲ್ಲಿ ಮನೆ ಮಾತಾಗಿದೆ. ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ಗಟ್ಟಿಯಾದ ನಿಲುವನ್ನು ಪ್ರದರ್ಶನ ಮಾಡಿ ಅವುಗಳನ್ನು ಮಟ್ಟ ಹಾಕುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ, ಉದ್ಯೋಗದ ಮಾಹಿತಿ ನೀಡುವ ಹಾಗೂ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಪ್ರತಿವರ್ಷ ಗೌರವಿಸುವುದರ ಜೊತೆಗೆ ನಮ್ಮ ಪರಿವರ್ತನಾ ವೇದಿಕೆಯು ಜನರಿಗೆ ಧ್ವನಿಯಾಗಿ, ನೌಕರರಿಗೆ ಶಕ್ತಿಯಾಗಿ ಜನಸಾಮಾನ್ಯರಿಗೆ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾದುದು” ಎಂದರು..

ಆಯ್ಕೆಯಾದ ಪರಿವರ್ತನಾ ವೇದಿಕೆಯ ಪದಾಧಿಕಾರಿಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಾತಿ ವಿನಾಶ ಪುಸ್ತಕಗಳನ್ನು ನೀಡಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷರಾದ ನಾಗಸಮುದ್ರ ಮರಿಸ್ವಾಮಿ “ಸೇವೆಯು ಒಂದು ಜವಾಬ್ದಾರಿಯಾಗಬೇಕು, ನಮ್ಮ ವೇದಿಕೆಯ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತ ನೀವುಗಳು ಯಾವುದೇ ಪಕ್ಷಭೇದವಿಲ್ಲದೆ, ಸರ್ವ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಶಿಸ್ತು, ಸಂಯಮ, ಪ್ರಾಮಾಣಿಕತೆಯನ್ನು ಹಾಗೂ ಸಮಯಪ್ರಜ್ಞೆಯನ್ನು ಪರಿಪಾಲಿಸಿಕೊಂಡು ಸಮಾಜದ ಪರಿವರ್ತನೆಗಾಗಿ ನಾವು ನೀವೆಲ್ಲರೂ ದುಡಿಯುವುದು ನಮ್ಮ ಮೂಲಭೂತ ಜವಾಬ್ದಾರಿಯಾಗಬೇಕು. ಆಗಾಗ ಮಾತ್ರ ಸಮಾಜ ಸರಿದಾರಿಗೆ ಬಂದು ಪರಿವರ್ತನೆಯ ಹಾದಿಯಲ್ಲಿ ಸಾಗಲು ತುಂಬಾ ಸುಲಭವಾಗಿರುತ್ತದೆ. ಹಾಗಾಗಿ ನಾವೆಲ್ಲರೂ ಕಟ್ಟಿಬದ್ಧರಾಗಿ ಪ್ರಾಮಾಣಿಕವಾಗಿ ದುಡಿಯೋಣ” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಎಪಿಎಂಸಿಯಲ್ಲಿ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ, ಖರೀದಿ ಕೇಂದ್ರ ತೆರೆಯಲು ರೈತ ಸಂಘ ಆಗ್ರಹ
ಪರಿವರ್ತನಾ ವೇದಿಕೆಯ ಮೊಳಕಾಲ್ಮೂರು ತಾಲೂಕು ಅಧ್ಯಕ್ಷರಾಗಿ ಜಿ. ಬಸವರಾಜ್ ವಡೇರಹಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ತಮ್ಮೇನಹಳ್ಳಿ ತಿಪ್ಪೇಸ್ವಾಮಿ, ಉಪಾಧ್ಯಕ್ಷರುಗಳಾಗಿ ಮೊಗಳಹಳ್ಳಿ ತಿಪ್ಪೇಸ್ವಾಮಿ, ನಾಗೇಶ್ ನೇರ್ಲಹಳ್ಳಿ, ಭಟ್ರಹಳ್ಳಿ ಚಂದ್ರಣ್ಣ, ನಾಗರಾಜ್ ಬಿಜಿಕೆರೆ, ಯರ್ರಿಸ್ವಾಮಿ ತಿಮ್ಮಲಾಪುರ ಇವರುಗಳನ್ನು ಆಯ್ಕೆ ಮಾಡಲಾಯಿತು..
ಗೌರವ ಅಧ್ಯಕ್ಷರಾಗಿ ಭಂಗಿ ನಾಗರಾಜ್ ಹಾಗೂ ಟಿ. ಶಿವಣ್ಣ ತಿಮ್ಮಲಾಪುರ, ಹಾಗೂ ತಾಲೂಕು ಸಂಚಾಲಕರುಗಳಾಗಿ ಎಸ್ ಶಿವಣ್ಣ, ತಿಮ್ಮಪ್ಪ, ಯಲ್ಲಪ್ಪ,ಎಸ್ ಹಾಗೂ ವೇದಿಕೆಯ ಮಹಾ ಪೋಷಕರಾಗಿ ವಕೀಲರಾದ ತಿಪ್ಪೇರುದ್ರಪ್ಪ ಶಿಕ್ಷಕರಾದ ಎಸ್.ಟಿ,ಬಸವರಾಜ್, ಆನಂದ್, ಕರಿಯಣ್ಣ, ಮುರುಳಿ ಹಾಗೂ ನಾಗಣ್ಣ ಮೊದಲಾದವರನ್ನು ಆಯ್ಕೆ ಮಾಡಲಾಯಿತು.